ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 11ರ ಮನರಂಜನೆ ನೀಡಿದ ವ್ಯಕ್ತಿ ವಕೀಲ ಜಗದೀಶ್ ಜಾಮೀನಿನ ಮೇಲೆ ಚಿಕಿತ್ಸೆ ಪಡೆಯಲು ಹೊರಗೆ ಬಂದಿರುವ ನಟ ದರ್ಶನ್ ತೂಗುದೀಪ ವಿರುದ್ಧ ಕೋಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದರ್ಶನ್ ಮೇಲೆ ದೂರು ದಾಖಲಿಸಿದ ಲಾಯರ್ ಜಗದೀಶ್, ನಟ ದರ್ಶನ್ s/o ಶ್ರೀನಿವಾಸ್ ತೂಗುದೀಪ ಹಾಗೂ ಆತನ ಅಭಿಮಾನಿಗಳಿಂದ ನನ್ನ ಮತ್ತು ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ. ನಾನು ದರ್ಶನ್ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದೇನೆಂದು ದರ್ಶನ್ ಅಭಿಮಾನಿಗಳು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ.
ಕಳೆದ 2 ದಿನಗಳಲ್ಲಿ ಬರೋಬ್ಬರಿ 1,000ಕ್ಕೂ ಅಧಿಕ ಬಾರಿ ಕರೆ ಮಾಡಿದ್ದಾರೆ. ಇದೆಲ್ಲದಕ್ಕೂ ಕಾರಣ ಈಗಾಗಲೇ ಕೊಲೆ ಆರೋಪಿಯಾಗಿರುವ ಹಾಗೂ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಬಂದು ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಅವರ ಸೂಚನೆ ಎಂದು ಆರೋಪ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳು ನಮ್ಮ ಬಾಸ್ ಬಗ್ಗೆ ಏಕವಚನದಲ್ಲಿ ಮಾತಾಡ್ತೀಯಾ ಎಂದು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇದೆಲ್ಲವನ್ನು ಸ್ವತಃ ನಟ ದರ್ಶನ್ ಬೇಕಂತೆಲೇ ಮಾಡಿಸುತ್ತಿದ್ದಾನೆ. ಇನ್ನು ದರ್ಶನ್ ಕೊಲೆ ಆರೋಪಿ ಆಗಿರುವುದರಿಂದ ಆತನ ನೆಟ್‌ವರ್ಕ್ ಕೂಡ ಹಾಗೆಯೇ ಇದೆ. ಹೀಗಾಗಿ, ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಅದರಲ್ಲಿಯೂ ದರ್ಶನ್ ಅಭಿಮಾನಿ ರಿಷಿ ಎನ್ನುವ ವ್ಯಕ್ತಿಯೇ ನನಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ನಟ ದರ್ಶನ್ ಹಾಗೂ ರಿಷಿ ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಿವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.