ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಇಂಡಿಯಾ ಬ್ಲಾಕ್ ಮಂಗಳವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಜೆಎಂಎಂ ನೇತೃತ್ವದ ಮೈತ್ರಿಕೂಟ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಬುಡಕಟ್ಟು ಜನಾಂಗದವರಿಗೆ ಸರ್ನಾ ಧರ್ಮ ಸಂಹಿತೆ ಮತ್ತು 1932 ರ ಖತಿಯಾನ್ ಆಧಾರದ ಮೇಲೆ ವಾಸಸ್ಥಳ ನೀತಿ ಜಾರಿ ಸೇರಿದಂತೆ ಯುವಜನರಿಗೆ 10 ಲಕ್ಷ ಉದ್ಯೋಗಗಳನ್ನು ನೀಡುವ ಭರವಸೆ ನೀಡಿದೆ.
‘ಒಂದು ಮತ, ಏಳು ಗ್ಯಾರಂಟಿಗಳು’ ಎಂಬ ಘೋಷಣೆಯ ಅಡಿಯಲ್ಲಿ ಇಂಡಿಯಾ ಮೈತ್ರಿಕೂಟ ಹಲವು ಭರವಸೆಗಳನ್ನು ನೀಡಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ ಸ್ಥಾಪಿಸಲು ಜೆಎಂಎಂ ಮೈತ್ರಿಕೂಟ ಪ್ರತಿಜ್ಞೆ ಮಾಡಿದೆ.
ಮುಖ್ಯಮಂತ್ರಿ ಹೇಮಂತ್ ಸೋರೆನ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಪ್ರಮುಖ ನಾಯಕರು ಇಂದು ಇಂಡಿಯಾ ಬ್ಲಾಕ್ ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಇಂಡಿಯಾ ಬ್ಲಾಕ್‌ನ ಏಳು ಗ್ಯಾರಂಟಿಗಳು
ಖತಿಯಾನ್‌ನ ಖಾತರಿ: ಸ್ಥಳೀಯ ಹಕ್ಕುಗಳನ್ನು ಕಾಪಾಡಲು 1932ರ ಖತಿಯಾನ್‌ನ ಆಧಾರದ ಮೇಲೆ ಸ್ಥಳೀಯ ನೀತಿ ಜಾರಿಗೊಳಿಸಲಾಗುವುದು. ಸರ್ನಾ ಧರ್ಮ ಸಂಹಿತೆಯನ್ನು ಪರಿಚಯಿಸಲಾಗುವುದು ಮತ್ತು ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿ ಸಂರಕ್ಷಿಸಲು ಕ್ರಮ.
ಮೈನಿಯ ಸಮ್ಮಾನ್ ಗ್ಯಾರಂಟಿ: ಡಿಸೆಂಬರ್ 2024 ರಿಂದ ಆರಂಭಗೊಂಡು, ಮೈನಿಯ ಸಮ್ಮಾನ್ ಯೋಜನೆಯಡಿ ರೂ 2,500 ಗೌರವಧನ ಒದಗಿಸಲಾಗುತ್ತದೆ.
ಸಾಮಾಜಿಕ ನ್ಯಾಯದ ಖಾತರಿ: ಮೀಸಲಾತಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು, ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇಕಡಾ 28 ರಷ್ಟು, ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಶೇಕಡಾ 12 ಮತ್ತು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಶೇಕಡಾ 27 ರಷ್ಟು ಮೀಸಲಾತಿ ನೀಡಲಾಗುವುದು. ಹೆಚ್ಚುವರಿಯಾಗಿ, ಹಿಂದುಳಿ ವರ್ಗಗಳಿಗೆ ಪ್ರತ್ಯೇಕ ಕಲ್ಯಾಣ ಸಚಿವಾಲಯ. ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನೂ ರಕ್ಷಿಸಲಾಗುವುದು.
ಏಳು ಕೆಜಿ ಪಡಿತರ: ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 5 ಕೆಜಿಯಿಂದ 7 ಕೆಜಿಗೆ ಆಹಾರ ಧಾನ್ಯ. ಇದಲ್ಲದೆ, ಬಡ ಕುಟುಂಬಗಳಿಗೆ 450 ರೂ.ಗೆ ಗ್ಯಾಸ್ ಸಿಲಿಂಡರ್‌ಗಳು ಲಭ್ಯ.
ಉದ್ಯೋಗ ಖಾತ್ರಿ: ಜಾರ್ಖಂಡ್‌ನಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿ
ಶಿಕ್ಷಣದ ಭರವಸೆ: ಪ್ರತಿ ಬ್ಲಾಕ್‌ನಲ್ಲಿ ಪದವಿ ಕಾಲೇಜುಗಳನ್ನು ಸ್ಥಾಪನೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು.
ರೈತ ಕಲ್ಯಾಣ ಖಾತ್ರಿ: ರೈತರ ಜೀವನೋಪಾಯವನ್ನು ಸುಧಾರಿಸಲು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಪರಿಷ್ಕರಿಸಲು ಮೈತ್ರಿಕೂಟ ವಾಗ್ದಾನ ಮಾಡಿದೆ. ಭತ್ತದ ಎಂಎಸ್‌ಪಿಯನ್ನು 2,400 ರೂ.ನಿಂದ 3,200 ರೂ.ಗೆ ಏರಿಸಲಾಗುತ್ತದೆ.