ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯನಾಗಲು ಭಾರತ ಅರ್ಹತೆ ಹೊಂದಿದೆ: ಜೈಶಂಕರ್ ಪ್ರತಿಪಾದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಬಲವಾದ ಅರ್ಹತೆಯನ್ನು ಭಾರತವು ಹೊಂದಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ವಿದೇಶಾಂಗ ಸಚಿವರಾದ ಬಳಿಕ ಸೌದಿ ಅರೇಬಿಯಾಕ್ಕೆ ಇದೇ ಮೊದಲ ಬಾರಿಗೆ ಜೈಶಂಕರ್‌ ಭೇಟಿ ನೀಡಿದ್ದು, ಅಲ್ಲಿನ ಮಾಧ್ತಯಮಗಳೊಂದಿಗೆ ಮಾತನಾಡಿದ್ದಾರೆ. ಭದ್ರತಾ ಮಂಡಳಿಯನ್ನು ಸುಧಾರಿಸುವ ಅಗತ್ಯತೆಯ ಬಗ್ಗೆ ಜಾಗತಿಕವಾಗಿ ರಾಷ್ಟ್ರಗಳ ಒಮ್ಮತವಿದೆ ಎಂದು ಅವರು ಹೇಳಿದ್ದಾರೆ. ಯುಎನ್‌ನ ಪ್ರಮುಖ ಅಂಗವಾದ ಭದ್ರತಾ ಮಂಡಳಿಯು ವಿಕಸನಗೊಳ್ಳುತ್ತಿರುವ ಜಾಗತಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು. ವಿಶೇಷವಾಗಿ ಇದು ಪೂರ್ಣವಾಗಿ ಪ್ರಪಂಚದ ನೈಜತೆಯನ್ನು ಪ್ರತಿಬಿಂಬಿಸುತ್ತಿಲ್ಲ. ವಿಸ್ತರಿತ ಮಂಡಳಿಯು ಭಾರತ ಮಾತ್ರವಲ್ಲದೆ ಸಾಕಷ್ಟು ರಾಷ್ಟ್ರಗಳ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಪೂರಕವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
“ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ, ಐದನೇ ಅತಿದೊಡ್ಡ ಆರ್ಥಿಕತೆ, ಪರಮಾಣು ಶಕ್ತಿ, ತಾಂತ್ರಿಕ ಕೇಂದ್ರ ಮತ್ತು ಜಾಗತಿಕ ಬಲಾಢ್ಯ ರಾಷ್ಟ್ರವಾಗಿ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಲು ಪ್ರಬಲವಾದ ಕಾರಣವನ್ನು ಹೊಂದಿದೆ ”ಎಂದು ಅವರು ಸೌದಿ ಗೆಜೆಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಶನಿವಾರ ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ. ಅವರು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಂದ ಲಿಖಿತ ಸಂದೇಶವನ್ನು ಹಸ್ತಾಂತರಿಸಿದ್ದಾರೆ. ಮತ್ತು ಭಾನುವಾರ ದ್ವಿಪಕ್ಷೀಯ ಬಾಂಧವ್ಯದ ಪ್ರಗತಿಯನ್ನು ಅವರಿಗೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!