Monday, October 2, 2023

Latest Posts

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಸಾಧಿಸಿದ್ದೇನನ್ನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ರ ಆವಿಸ್ಮರಣೀಯ ಆವೃತ್ತಿಗೆ ತೆರೆಬಿದ್ದಿದೆ. ದೇಶದ ಯುವ ಮತ್ತು ಮಹತ್ವಾಕಾಂಕ್ಷಿ ಕ್ರೀಡಾಪಟುಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮೆರೆಯುವ ಮೂಲಕ ತಮ್ಮ ವಿಶ್ವವಿದ್ಯಾಲಯಗಳಿಗೆ ಪ್ರಶಸ್ತಿ ಗಳಿಸಿಕೊಟ್ಟಿದ್ದಾರೆ. ಕ್ರೀಡಾಕೂಟದಲ್ಲಿ 20 ಚಿನ್ನ, ಏಳು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಒಟ್ಟು 32 ಪದಕ ಗಳಿಸಿದ ಆತಿಥೇಯ ಜೈನ್‌ ವಿವಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಜೈನ್ ವಿವಿಯ ಈಜುಪಟು ಶಿವ ಶ್ರೀಧರ್ ಬರೋಬ್ಬರಿ ಏಳು ಚಿನ್ನ, ಎರಡು ಬೆಳ್ಳಿ ಪದಕಗಳಿಗೆ ಮುತ್ತಿಡುವ ಮೂಲಕ ಚಾಂಪಿಯನ್‌ಶಿಪ್‌ನ ಅತ್ಯಂತ ಯಶಸ್ವಿ ಅಥ್ಲೀಟ್‌ ಎನಿಸಿಕೊಂಡರು.

*ಆತಿಥೇಯರಿಗೆ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಕಠಿಣ ಪೈಪೋಟಿ ಎದುರಾಗಿತ್ತು. ಈ ವಿವಿ ಒಟ್ಟಾರೆ 51 ಪದಕ ಗಳಿಸಿತಾದರೂ (17 ಚಿನ್ನ, 15 ಬೆಳ್ಳಿ, 19 ಕಂಚು) ಚಿನ್ನದ ಗಳಿಕೆಯಲ್ಲಿ ಹಿಂದಕ್ಕೆ ಬಿದ್ದು ರನ್ನರ್‌ ಅಪ್‌ ಸ್ಥಾನ ಗಳಿಸಿತು. ಕಳೆದ ಬಾರಿಯ ಚಾಂಪಿಯನ್ನರಾದ ಪಂಜಾಬ್ ವಿವಿ (15 ಚಿನ್ನ, 9 ಬೆಳ್ಳಿ, 24 ಕಂಚು) ಮೂರನೇ ಸ್ಥಾನದಲ್ಲಿ ಪಂದ್ಯಾವಳಿಯನ್ನು ಮುಗಿಸಿದರು.

*ಕೂಟದಲ್ಲಿ ಬರೊಬ್ಬರಿ 97 ಹೊಸ ದಾಖಲೆಗಳು ನಿರ್ಮಾಣವಾದವು. ಅದರಲ್ಲಿಯೂ ಎರಡು ರಾಷ್ಟ್ರೀಯ ದಾಖಲೆಗಳೇ ಪತನವಾಗಿದ್ದು ವಿಶೇಷ. ಪುರುಷರ 200 ಮೀಟರ್ ಈಜು ವೈಯಕ್ತಿಕ ವಿಭಾಗದಲ್ಲಿ ಶಿವ ಶ್ರೀಧರ್ ಈ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಮಹಿಳೆಯರ ವೇಟ್‌ಲಿಫ್ಟಿಂಗ್ 87 ಕೆಜಿ ವಿಭಾಗದಲ್ಲಿ ಎಂ.ಟಿ. ಆನ್ ಮರಿಯಾ ಅವರು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿನ ಹಳೆಯ ದಾಖಲೆ ಮುರಿದುಹಾಕಿದರು. ಇನ್ನಳಿದಂತೆ ವೇಟ್‌ಲಿಫ್ಟಿಂಗ್‌ನಲ್ಲಿ 42, ಪೂಲ್‌ ವಿಭಾಗಲ್ಲಿ 28, ಅಥ್ಲೆಟಿಕ್ಸ್‌ನಲ್ಲಿ 23 ಹೊಸ ದಾಖಲೆಗಳು ನಿರ್ಮಾಣವಾದವು.

*ಜೈನ್‌ ವಿವಿಯ ಈಜುಪಟು ಶಿವ ಶ್ರೀಧರ್ ಒಟ್ಟಾರೆ ಒಂಬತ್ತು ಪದಕಗಳನ್ನು ಗಳಿಸುವ ಮೂಲಕ ಖೇಲೋ ಇಂಡಿಯಾ ವಿವಿ ಕ್ರೀಡಾಕೂಟದ ಇತಿಹಾಸದಲ್ಲಿಯೇ ಅತಿಹೆಚ್ಚು ಪದಕ ಗೆದ್ದ ಇತಿಹಾಸ ಬರೆದರು. ಅದೇ ಕಾಲೇಜಿನ ಈಜುಗಾರ್ತಿ ಶೃಂಗಿ ಬಾಂದೇಕರ್ ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿ ಗೆಲ್ಲುವ ಮೂಲಕ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದಲ್ಲಿ ಅತಿಹೆಚ್ಚು ಪದಕ ಗೆದ್ದ ಸಾಧನೆ ಮಾಡಿದರು.

* ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯು 51 ಪದಕ ಗಳಿಸುವ ಮೂಲಕ ಈವರೆಗೆ ನಡೆದ ಕ್ರೀಡಾಕೂಟಗಳಲ್ಲಿಯೇ ಒಟ್ಟಾರೆ ಅತಿಹೆಚ್ಚು ಪದಕ ಗಳಿಸಿದ ಸಾಧನೆ ಮರೆಯಿತು. ಆದರೆ ಚಿನ್ನದ ಗಳಿಕೆ ಕಡಿಮೆ ಇದ್ದುದರಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯ್ತು.

* ತುರುಸಿನ ಹಣಾಹಣಿಯಿಂದ ಕುತೂಹಲ ಕೆರಳಿಸಿದ ಕಬಡ್ಡಿ ಫೈನಲ್‌ನಲ್ಲಿ ಕೋಟಾ ವಿಶ್ವವಿದ್ಯಾನಿಲಯ ಮತ್ತು ಕುರುಕ್ಷೇತ್ರ ವಿಶ್ವವಿದ್ಯಾನಿಲಯ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಪ್ರಶಸ್ತಿಗಳನ್ನು ಗೆದ್ದುಕೊಂಡವು.

*ಈ ಆವೃತ್ತಿಯ ಕ್ರೀಡಾಕೂಟ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಸಲುವಾಗಿ ʼಹಸಿರು ಕ್ರೀಡಾಕೂಟದʼ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ತ್ಯಾಜ್ಯ ನಿರ್ವಹಣೆಯ ಕುರಿತಾಗಿ ಪ್ರಚುರಪಡಿಸಲಾಯ್ತು. ಅಲ್ಲದೇ ಹಸಿರು ಕ್ರೀಡಾಕೂಟದ ಗುರಿಯನ್ನು ಈಡೇರಿಸಲು ರಾಜ್ಯ ಸರ್ಕಾರವು ಈ ಕ್ರೀಡಾಕೂಟದಲ್ಲಿ ಭಾಗಿಯಾದ 3886 ವಿದ್ಯಾರ್ಥಿಗಳಿಗೆ ಸಮಾನ ಸಂಖ್ಯೆಯ ಮರಗಳನ್ನು ನೆಡಲು ನಿರ್ಧರಿಸಿದೆ.

*ಕಂಠೀರವ ಕ್ರೀಡಾಂಗಣದಲ್ಲಿಯೇ ಆಯೋಜಿಸಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭ ವರ್ಣರಂಜಿತವಾಗಿತ್ತು. ಗೃಹ ಸಚಿವ ಶ್ರೀ ಅಮಿತ್ ಶಾ ಜೈನ್ ವಿವಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ ಪ್ರದಾನ ಮಾಡಿದರು. ಸಿಎಂ ಬಸವರಾಜ ಬೊಮ್ಮಾಯಿ, ಮಾನ್ಯ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್, ಯುವ ವ್ಯವಹಾರಗಳು ಮತ್ತು ಮತ್ತು ಗೃಹ ಖಾತೆ ರಾಜ್ಯ ಸಚಿವ ನಿಸಿತ್, ಸ್ಯಾಂಡಲ್‌ ವುಡ್‌ ನಟ ಕಿಚ್ಚ ಸುದೀಪ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

*ಕ್ರೀಡಾಕೂಟದ ಕಬಡ್ಡಿ ಫೈನಲ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರೋ ಕಬಡ್ಡಿ ಲೀಗ್‌ ನಲ್ಲಿ ಆಟವಾಡಲು ಅವಕಾಶ ಕಲ್ಪಿಸುವಂತೆ ಕ್ರೀಡಾಪಟುಗಳು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರಲ್ಲಿ ಮನವಿ ಸಲ್ಲಿಸಿದರು. ಈ ಕುರಿತು ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತು.

*ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಕಂಚಿನ ಪದಕಗಳನ್ನು ಗೆದ್ದ ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಸಮಾರೋಪದಲ್ಲಿ ಉಪಸ್ಥಿತರಾಗಿದ್ದು ವಿಶೇಷವಾಗಿತ್ತು. ಅಮಿತ್ ಶಾ ಅವರು ಎರಡೂ ತಂಡಗಳಿಗೆ ಸನ್ಮಾನಿಸಿ ಅಭಿನಂದಿಸಿದರು.

*ಸಮಾರೋಪ ಸಮಾರಂಭದಲ್ಲಿ 500 ಕ್ಕೂ ಹೆಚ್ಚಿನ ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಲೇಸರ್ ಶೋಗಳು ಗಮನ ಸಳೆಯಿತು. ನೂರಾರು ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಯೋಗಾಸನದ ವಿವಿಧ ಆಸನಗಳ ಪ್ರದರ್ಶನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ‘ಆಜಾದಿ ಕಾ ಅಮೃತ್ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!