ಜಮ್ಮುವಿನಲ್ಲಿ‌ ಪೊಲೀಸರ ರೋಚಕ ಕಾರ್ಯಾಚರಣೆ: ಮೂವರು ಜೈಶ್ ಉಗ್ರರು ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಜಮ್ಮುವಿನಲ್ಲಿ ಜೈಶ್‌ ಎ ಮೊಹಮದ್ ಭಯೋತ್ಪಾದನಾ ಘಟಕವನ್ನು ಭೇದಿಸುವ ಮೂಲಕ ಪೊಲೀಸರು ಅಪಾರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರಲ್ಲದೆ ಮೂವರು ಭಯೋತ್ಪಾದಕರನ್ನು ಬಂಧಿಸಿದ್ದಾರೆ.
ನವೆಂಬರ್ 9 ರ ಮಧ್ಯರಾತ್ರಿ ತ್ರಿಕೂಟ ನಗರದ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದರು. ಈ ವೇಳೆ ಪೊಲೀಸ್ ತಂಡವು ನರ್ವಾಲ್‌ನಲ್ಲಿ ನಿಂತಿದ್ದ ತೈಲ ಟ್ಯಾಂಕರ್ (JK02BF 2965) ಅನ್ನು ಗಮನಿಸಿ ಅದನ್ನು ಮುಂದಕ್ಕೆ ಚಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ.
ಆದರೆ ಅದೇ ಟ್ರಕ್ ಮತ್ತೆ ಎನ್ವಿರಾನ್ಮೆಂಟ್ ಪಾರ್ಕ್ ಬಳಿ ನಿಂತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಪೊಲೀಸ್  ಪೆಟ್ರೋಲಿಂಗ್ ಚಾಲಕನನ್ನು ಮುಂದೆ ಚಲಿಸುವಂತೆ ಮತ್ತೆ ಸೂಚಿಸಿದೆ. ಆ ದರೆ ಆತ ಯು-ಟರ್ನ್ ತೆಗೆದುಕೊಂಡು ಮತ್ತೆ ನರ್ವಾಲ್‌ ಗೆ ತಂದು ನಿಲ್ಲಿಸಿದ್ದಾನೆ. ಅದೇ ಟ್ರಕ್ ಮತ್ತೆ ಅಲ್ಲಿಗೆ ಬಂದದ್ದು ಪೊಲೀಸರಿಗೆ ಅನುಮಾನ ಮೂಡಿಸಿದೆ.
ಈ ಬಗ್ಗೆ ಪ್ರಶ್ನಿಸಿದಾಗ, ಚಾಲಕ ತೃಪ್ತಿದಾಯಕ ಉತ್ತರವನ್ನು ನೀಡುವ ಬದಲು ತನ್ನ ಇಬ್ಬರು ಸಹಚರರೊಂದಿಗೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ಈ ವೇಳೆ ಚಾಲಕ ಮತ್ತು ಇತರ ಇಬ್ಬರನ್ನು ಠಾಣೆಗೆ ಕರೆದೊಯ್ದು ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಚಾಲಕ ಮೊಹಮ್ಮದ್ ಯಾಸೀನ್, ಫರ್ಹಾನ್ ಫಾರೂಕ್ ಮತ್ತು ಫಾರೂಕ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಪಾಂಪೋರ್ ನಿವಾಸಿಗಳಾಗಿದ್ದಾರೆ.
“ಕಾನೂನು ವಿಧಿವಿಧಾನಗಳ ನಂತರ, ಆರೋಪಿಗಳು ಸೇರಿರುವ ಕಾಶ್ಮೀರಕ್ಕೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಅವರ ಪೂರ್ವಾಪರವನ್ನು ಪರಿಶೀಲಿಸಲು ಸಂಕೇತವನ್ನು ಕಳುಹಿಸಲಾಗಿದೆ. ಟ್ರಕ್ ಚಾಲಕ ಅವಂತಿಪೋರಾದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅವರು ಜೈಶ್-ಎ-ಮೊಹಮ್ಮದ್ ಜೊತೆಗೂ ಸಂಬಂಧ ಹೊಂದಿರುವುದು ತಿಳಿದು ಬಂದಿದೆ.
ತೀವ್ರ ವಿಚಾರಣೆಗೊಳಪಡಿಸಿದ ನಂತರ ಚಾಲಕ ಮೊಹಮ್ಮದ್ ಯಾಸೀನ್, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಹ್ಯಾಂಡ್ಲರ್ ಶಹಬಾಜ್ ಆದೇಶದ ಮೇರೆಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ನಾವು ಜಮ್ಮುವಿಗೆ ಬಂದಿದ್ದೆವು. ಅವುಗಳನ್ನು ಪಡೆದು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರಿಗೆ ಹಸ್ತಾಂತರಿಸುವ ಕಾರ್ಯವನ್ನು ನಮಗೆ ವಹಿಸಲಾಗಿತ್ತು. ತೈಲ ಟ್ಯಾಂಕರ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬಚ್ಚಿಟ್ಟಿದ್ದಾಗಿ ಯಾಸೀನ್ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಟ್ಯಾಂಕರ್‌ನಲ್ಲಿ ತಪಾಸಣೆ ನಡೆಸಿದಾಗ ಮೂರು ಎಕೆ-56 ರೈಫಲ್‌ಗಳು, ಒಂದು ಪಿಸ್ತೂಲ್, 9 ಮ್ಯಾಗಜೀನ್‌ಗಳು, 191 ಸುತ್ತು ಮದ್ದುಗುಂಡುಗಳು ಮತ್ತು ಆರು ಗ್ರೆನೇಡ್‌ಗಳು ಪತ್ತೆಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!