ಜಲಜೀವನ್ ಮಿಷನ್: ಕರ್ನಾಟಕದಲ್ಲಿ ₹ 4,400 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯು ಜಲಜೀವನ್ ಮಿಷನ್‌ನಡಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆಗೆ 4,400.46 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಿದೆ.

ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಜಲಜೀವನ್ ಮಿಷನ್‌ನಡಿಯಲ್ಲಿ ಇಡೀ ಕರ್ನಾಟಕದ ಪ್ರತಿಯೊಂದು ಮನೆಗೂ ನಳ್ಳಿ ನೀರು ಒದಗಿಸಿಕೊಡಬೇಕು ಎಂಬುದು ನಮ್ಮ ಕಾರ್ಯಕ್ರಮ. ಇದರಲ್ಲಿ ಎಲ್ಲೆಲ್ಲಿ ನಮಗೆ ನೀರು ತಕ್ಷಣ ಲಭ್ಯವಿದೆ ಅಲ್ಲಿಗೆ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ₹ 9200 ಕೋಟಿಗೂ ಅಧಿಕ ಮೊತ್ತದ ಯೋಜನೆಗಳು ಅನುಷ್ಠಾನವಾಗಲಿವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಕೇಂದ್ರ ಸರಕಾರದ ಯೋಜನೆಯಾದ ಜಲಜೀವನ್ ಮಿಷನ್ ಅನ್ನು 45:45:10 (ಕೇಂದ್ರ ಸರಕಾರ : ರಾಜ್ಯ ಸರಕಾರ : ಸ್ಥಳೀಯ ವಂತಿಗೆ) ಅನುಪಾತದಲ್ಲಿ ಅನುಷ್ಠಾನಿಸಬೇಕಿತ್ತು. ಸ್ಥಳೀಯ ವಂತಿಗೆ ತೆಗೆದುಕೊಳ್ಳುವುದು ಕಷ್ಟವಾಗಬಹುದೆಂಬ ಕಾರಣಕ್ಕೆ ಅದನ್ನೂ ರಾಜ್ಯ ಸರಕಾರವೇ ಭರಿಸುತ್ತಿದೆ. ಇದಕ್ಕೆ ರಾಜ್ಯ ಸರಕಾರದಲ್ಲಿ ಅನುದಾನವಿಲ್ಲದಿರುವುದರಿಂದ ವಿಶ್ವ ಬ್ಯಾಂಕ್‌ನಲ್ಲಿ ₹ 4500 ಕೋಟಿ ಸಾಲ ಪಡೆದು ಯೋಜನೆ ಅನುಷ್ಠಾನಿಸಲಾಗುತ್ತಿದೆ ಎಂದರು.

ಕ್ಯಾಬಿನೆಟ್‌ನಲ್ಲಿ ಅನುಮೋದನೆಗೊಂಡ ಯೋಜನೆಗಳು:

* ಶಿವಮೊಗ್ಗ ಜಿಲ್ಲೆ – ಸಾಗರ ತಾಲೂಕಿಗೆ ₹ 88 ಕೋಟಿ, ಶಿವಮೊಗ್ಗ ತಾಲೂಕಿಗೆ ₹ 16.53 ಕೋಟಿ.

* ಬಳ್ಳಾರಿ ಜಿಲ್ಲೆ – ಸಂಡೂರು ತಾಲೂಕಿಗೆ ₹ 131.21 ಕೋಟಿ.

* ಉ.ಕ. ಜಿಲ್ಲೆ – ಅಂಕೋಲಾ ತಾಲೂಕಿಗೆ ₹ 30.27 ಕೋಟಿ, ಕಾರವಾರ ತಾಲೂಕಿಗೆ ₹ 88.5 ಕೋಟಿ, ಕುಮಟಾ ತಾಲೂಕಿಗೆ ₹ 135 ಕೋಟಿ.

* ರಾಮನಗರ ಜಿಲ್ಲೆ – ರಾಮನಗರ ಮತ್ತು ಮಾಗಡಿ ತಾಲೂಕುಗಳಿಗೆ ₹ 155 ಕೋಟಿ, ರಾಮನಗರ ಮಂಚನಬೆಲೆ ಜಲಾಶಯದಿಂದ ಮಾಗಡಿ ಮತ್ತು ರಾಮನಗರ ತಾಲೂಕುಗಳಿಗೆ ನೀರು ಪೂರೈಕೆಗೆ ₹ 670 ಕೋಟಿ.

* ಹಾಸನ ಜಿಲ್ಲೆ – ಅರಕಲಗೋಡು ತಾಲೂಕಿಗೆ ₹ 185 ಕೋಟಿ, ಅರಕಲಗೋಡು-ಹೊಳೆನರಸೀಪುರ ತಾಲೂಕುಗಳಿಗೆ ₹ 160 ಕೋಟಿ, ಚನ್ನರಾಯಪಟ್ಟಣ ತಾಲೂಕಿಗೆ ₹ 320 ಕೋಟಿ; ಆಲೂರು, ಬೇಲೂರು, ಹಾಸನ ಮತ್ತು ಸಕಲೇಶಪುರ ತಾಲೂಕುಗಳಿಗೆ ₹ 810 ಕೋಟಿ.

* ಚಿಕ್ಕಬಳ್ಳಾಪುರ ಜಿಲ್ಲೆ – ಚಿಕ್ಕಬಳ್ಳಾಪುರ ತಾಲೂಕಿಗೆ ₹ 13.3 ಕೋಟಿ, ಗುಂಡಿಬಂಡೆ ತಾಲೂಕಿಗೆ ₹ 15 ಕೋಟಿ.

* ಚಿತ್ರದುರ್ಗ ಜಿಲ್ಲೆ – ಹೊಳಲ್ಕೆರೆ ತಾಲೂಕಿಗೆ ₹ 367.65 ಕೋಟಿ.

* ಉಡುಪಿ ಜಿಲ್ಲೆ – ಹೆಬ್ರಿ, ಕಾರ್ಕಳ ಮತ್ತು ಕಾಪು ತಾಲೂಕುಗಳಿಗೆ ₹ 1215 ಕೋಟಿ

ಈ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು. 2023ರೊಳಗೆ ಈ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಬೃಹತ್ ಯೋಜನೆಗಳಿಗೆ 2024ರಲ್ಲಿ ಪೂರ್ಣಗೊಳಿಸಲು ಅನುಮತಿ ನೀಡಲಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!