ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಹಿಜಾಬ್ ವಿವಾದ ಸಂಬಂಧಪಟ್ಟ ಮೊಕದ್ದಮೆಗಳು ಹೈಕೋರ್ಟ್‌ನಲ್ಲಿದ್ದು, ಸಂವಿಧಾನದ ಪ್ರಶ್ನೆಗಳು ಈ ಮೊಕದ್ದಮೆಯಲ್ಲಿ ಅಡಗಿರುವುದರಿಂದ ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಕೋರ್ಟ್ ಆದೇಶಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠದಿಂದ ವಿಚಾರಣೆ ನಡೆಯುತ್ತಿತ್ತು. ಆದರೆ ಆರಂಭದಲ್ಲಿಯೇ ಈ ವಿಷಯದ ಕುರಿತು ವಿಸ್ತೃತ ಪೀಠದ ಅಗತ್ಯವನ್ನು ನ್ಯಾಯಮೂರ್ತಿಗಳು ಉಲ್ಲೇಖಿಸಿದರು.
ನೆರೆಯ ರಾಜ್ಯಗಳ ಹೈಕೋರ್ಟ್ ತೀರ್ಪುಗಳಿಂದ ಹೊರಹೊಮ್ಮುವ ವಿಚಾರಧಾರೆಗಳನ್ನು ಪರಿಗಣಿಸಬೇಕಾಗಿದೆ. ಆದ್ದರಿಂದ ಈ ವಿಷಯವನ್ನು ವಿಸ್ತೃತ ಪೀಠದಿಂದ ವಿಚಾರಣೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ. ಎಲ್ಲರೂ ಒಪ್ಪಿದರೆ ವಿಸ್ತೃತ ಪೀಠವನ್ನು ಮಾಡಬಹುದು ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದರು.
ಅರ್ಜಿದಾರರ ಪರ ವಕೀಲರು ವಿಸ್ತೃತ ಪೀಠಕ್ಕೆ ಆದೇಶಿಸುವುದಕ್ಕೆ ಅಡ್ಡಿಯಿಲ್ಲ, ಆದರೆ ಮಧ್ಯಂತರ ಆದೇಶ ನೀಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಮಧ್ಯಂತರ ಆದೇಶ ನೀಡುವುದು ಸರಿಯಲ್ಲ. ಇದರಿಂದ ಅರ್ಜಿದಾರರ ವಾದ ಒಪ್ಪಿದಂತಾಗುತ್ತದೆ ಎಂದರು.
ಎರಡೂ ಕಡೆಯ ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅಂತಿಮವಾಗಿ ಮೊಕದ್ದಮೆಗಳನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶಿಸಿದರು.