ಜಾಂಬೂರಿ ನಿಜಾರ್ಥದ ಸಾಂಸ್ಕೃತಿಕ ಕ್ರಾಂತಿ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಅಂತಾರಾಷ್ಟ್ರೀಯ ಸ್ಕೌಟ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿಯ ಮೂಲಕ ನಿಜಾರ್ಥದ ಸಾಂಸ್ಕೃತಿಕ ಕ್ರಾಂತಿ ನಡೆದಿದೆ. ಇದು ದೊಡ್ಡ ಇತಿಹಾಸವೊಂದನ್ನು ಸೃಷ್ಠಿಸಿದ್ದು ಯಶಸ್ವೀ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಕರ್ನಾಟಕ ರಾಜ್ಯ ಸರಕಾರದಿಂದ ಸಂಪೂರ್ಣ ಸಹಕಾರವನ್ನು ಜಾಂಬೂರಿಗೆ ನೀಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಪುತ್ತಿಗೆಯ ವನಜಾಕ್ಷಿ ಕೆ.ಶ್ರೀಪತಿ ಭಟ್‌ ವೇದಿಕೆಯಲ್ಲಿ ಭಾನುವಾರ ರಾತ್ರಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಕೊಡಮಾಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಐವತ್ತು ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳು ರಾಷ್ಟ್ರ ಧ್ವಜದ ಮೂಲಕ ರಾಷ್ಟ್ರಗೌರವ ಸೂಚಿಸಿದ ಕಾರ್ಯ ಅವಿಸ್ಮರಣೀಯವಾಗಿತ್ತು ಎಂದು ಪ್ರಶಂಸಿದರು. ಇಡೀ ವಿಶ್ವದಲ್ಲಿ ಧರ್ಮದ ಹೆಸರಿನಲ್ಲಿ ಬಹುದೊಡ್ಡ ಹಿಂಸೆ ನಡೆಯುತ್ತಿದೆ. ಇದು ಅಂತ್ಯದ ಆರಂಭವಾಗಿದೆ ಎಂದು ವ್ಯಾಖ್ಯಾನಿಸಿದರು.

ಭಯೋತ್ಪಾದನೆಯನ್ನು ತಡೆಯುವ ತಾಕತ್ತು ಭಾರತದೇಶಕ್ಕೆ ಮಾತ್ರ ಇದೆ ಎಂದ ಅವರು ಮನಃ ಪರಿವರ್ತನೆಯಿಂದ ಮಾತ್ರ ಇಂತಹ ಹಿಂಸಾತ್ಮಕ ಚಟುವಟಿಕೆಗಳ ನಿಯಂತ್ರಣ ಸಾಧ್ಯ. ಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನು ಭಾರತ ಮಾಡುತ್ತಿದೆ. ಆ ಕಾರಣಕ್ಕೆ ಭಾರತದಿಂದ ಇಂತಹ ದುಷ್ಕೃತ್ಯ ತಡೆಯಲು ಸಾಧ್ಯ ಎಂದರು.

ಈ ದೇಶಕ್ಕೆ ಚರಿತ್ರೆಯೂ ಇದೆ ಚಾರಿತ್ರ್ಯವೂ ಇದೆ. ಚರಿತ್ರೆಯೊಂದಿಗೆ ಚಾರಿತ್ರ್ಯವೆಂಬುದು ಅತೀ ಅವಶ್ಯಕ. ಚಾರಿತ್ರ್ಯವನ್ನು ಕಲಿಸುವ ಮಹತ್ಕಾರ್ಯವನ್ನು ಸ್ಕೌಟ್‌ ಗೈಡ್ಸ್‌ ಮಾಡುತ್ತಿದೆ ಎಂದರು.

ನಾನೂ ಸ್ಕೌಟ್‌:
ಸ್ಕೌಟ್‌ ಗೈಡ್ಸ್‌ ಸಂಘಟನೆಯೆಂದರೆ ನನಗೆ ಪ್ರೀತಿ ಎಂದ ಮುಖ್ಯಮಂತ್ರಿಗಳು ಬಾಲ್ಯದಿಂದಲೇ ಈ ಚಳುವಳಿಯಲ್ಲಿ ತೊಡಗಿಸಿರುವುದಾಗಿ ತಿಳಿಸಿದರು. ಮೂರು ಬೆರಳಿನ ಸೆಲ್ಯೂಟ್‌ನ ಮಹತ್ವ ಸಾರಿದ ಅವರು ಮೌಲ್ಯಯುತ ಜೀವನ, ಶಿಸ್ತು, ಸಂಯಮದ ಮೂಲಕ ಸತ್ಪ್ರಜೆಗಳನ್ನು ರೂಪಿಸುವ ಮಹತ್ಕಾರ್ಯ ಈ ಸಂಘಟನೆಯಿಂದಾಗುತ್ತದೆ ಎಂದರು.

ಪ್ರಧಾನಿ ಮೋದಿಯವರ ರಾಷ್ಟ್ರ ನಿರ್ಮಾಣದ ಕನಸು ಸಾಕಾರಗೊಳ್ಳುವುದರಲ್ಲಿ ಸಂದೇಹವೇ ಇಲ್ಲ ಎಂದ ಮುಖ್ಯಮಂತ್ರಿಗಳು ಮುಂದಿನ ಪೀಳಿಗೆಗೆ ಮಾನವೀಯತೆಯನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ. ಅಂತಹ ಮಹತ್ಕಾರ್ಯವನ್ನು ಸ್ಕೌಟ್‌ ಗೈಡ್ಸ್‌ ಸಂಘಟನೆ ಮಾಡುತ್ತಿದೆ ಎಂದರು.

ಸನ್ಮಾನ:
ಮುಖ್ಯಮಂತ್ರಿಗಳಿಗೆ ರೇಷ್ಮೆ ಶಾಲು, ಫಲವಸ್ತು , ಡಾ.ಎಂ.ಮೋಹನ ಆಳ್ವರ ವಸ್ತುಸಂಗ್ರಹಾಲಯದ ಅದ್ಭುತ ಅನರ್ಘ್ಯ ಗಣಪತಿ ವಿಗ್ರಹ ನೀಡಿ ಸನ್ಮಾನಿಸಲಾಯಿತು. ವರ್ಣ ಛತ್ರಿಯಡಿ ಮುಖ್ಯಮಂತ್ರಿಗಳಿಗೆ ಪನ್ನೀರ ಸಿಂಚನಗೈದು, ಆರತಿಬೆಳಗಿ, ಆರತಿ ಹಾಡಿನೊಂದಿಗೆ ಸಾಂಪ್ರದಾಯಿಕ ಗೌರವ ತೋರಲಾಯಿತು.

ಹೊಸ ಶಖೆಗೆ ನಾಂದಿ:
ಮೂಡುಬಿದಿರೆಯಲ್ಲಿ ನಡೆದ ಜಾಂಬೂರಿ ಹೊಸ ಶಖೆಯೊಂದಕ್ಕೆ ನಾಂದಿ ಹಾಡಿದೆ. ಸಾಂಸ್ಕೃತಿಕದ ನಿಜಾರ್ಥವನ್ನು ಸಾರ್ಥಕ ಗೊಳಿಸಿದೆ ಎಂದು ರಾಜ್ಯ ಸಭಾ ಸದಸ್ಯ ಅನಿಲ್‌ ಕುಮಾರ್‌ ಜೈನ್‌ ಹೇಳಿದರು. ಸ್ಕೌಟ್‌ ಗೈಡ್ಸ್‌ ಸಂಘಟನೆ ಒಂದು ಸ್ಪಷ್ಟ ಗುರಿ ಉದ್ದೇಶಗಳೊಂದಿಗೆ ಕಾರ್ಯಾಚರಿಸುತ್ತಿದೆ. ಉತ್ತಮ ನಾಗರೀಕರನ್ನು ರೂಪಿಸುವ ಕಾರ್ಯ ಮಾಡುತ್ತಿದೆ ಎಂದರು.

ಸಹಕಾರ ನೀಡಿ:
ಏಳು ದಿನಗಳ ಕಾಲ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಯೋಜಿಸಿದ ಜಾಂಬೂರಿಗೆ ಸುಮಾರು ೪೦ಕೋಟಿ ಖರ್ಚಾಗಿದೆ. ರಾಜ್ಯ ಸರಕಾರ ದೊಡ್ಡ ರೀತಿಯ ಸಹಕಾರವನ್ನು ನೀಡಿ ಸಹಕರಿಸುವಂತೆ ಭಾರತ್‌ ಸ್ಕೌಟ್‌ ಗೈಡ್ಸ್‌ ದ.ಕ.ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ.ಮೋಹನ ಆಳ್ವ ವಿನಂತಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್‌ ಕುಮಾರ್‌, ಶಿಕ್ಷಣ ಸಚಿವ ನಾಗೇಶ್‌, ಭಾರತ್‌ ಸ್ಕೌಟ್‌ ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌ ಸಿಂಧ್ಯ, ವಂದನಾ ಜೈನ್‌, ಸಚಿವ ಕೆ.ಸಿ.ನಾರಾಯಣ, ಸಿ.ಟಿ. ರವಿ, ಶಾಸಕ ಲಾಲಾಜಿ ಮೆಂಡನ್‌, ಶಾಸಕ ಉಮಾನಾಥ್‌ ಕೋಟ್ಯಾನ್, ಉದ್ಯಮಿ ಶ್ರೀಪತಿ ಭಟ್‌, ಪುರಸಭಾಧ್ಯಕ್ಷ ಪ್ರಸಾದ್‌ ಕುಮಾರ್‌ ವೇದಿಕೆಯಲ್ಲಿದ್ದರು.
ವೇಣುಗೋಪಾಲ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!