ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ಮೇಳೈಸಿರುವ ‘ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ’ ಹಲವು ಅದ್ಭುತಕ್ಕೆ ಸಾಕ್ಷಿಯಾಗಿವೆ.
ಇಲ್ಲಿ ನಿತ್ಯವೂ ನಾನಾ ಮನರಂಜನೆಯ ಸಂಭ್ರಮ. ಎಲ್ಲಿ ನೋಡಿದರೂ ನಾನಾ ಬಗೆಯ ಕಲಾತ್ಮಕ ಕ್ಷಣಗಳು. ಅಂತಹ ಹಲವು ಕ್ಷಣದಲ್ಲಿ ನೋಡುಗರನ್ನು ಸೆಳೆದಿದೆ ಈ ೫೦ ಅಡಿ ಎತ್ತರದ ಗಾಳಿಪಟ.
ದಿನೇಶ್ ಹೊಳ್ಳ ನೇತೃತ್ವದಲ್ಲಿ ಕೊಡೆ ಬಟ್ಟೆಯಿಂದ ಈ ಬೃಹತ್ ಗಾಳಿಪಟ ನಿರ್ಮಾಣಗೊಂಡಿದೆ. ಇದರಲ್ಲಿ ಅನೇಕ ವಿಶೇಷತೆಗಳಿವೆ. ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೇವಾರಾಧನೆ, ದೈವಾರಾಧನೆ, ಜಾನಪದಗಳನ್ನು ಬಿಂಬಿಸುವ ಚಿತ್ರಿಸುವ ಕಾರ್ಯ ನಡೆದಿದೆ.
ಜಾಂಬೂರಿಯಲ್ಲಿ ಪಾಲ್ಗೊಂಡ ೫೦ ಸಹಸ್ರ ಮಕ್ಕಳನ್ನು ಪ್ರತಿನಿಧಿಸುವ ರೀತಿಯಲ್ಲಿ ಆಳ್ವಾಸ್‌ನ ಕಾಲೇಜು ಕಟ್ಟಡದಲ್ಲಿ ಶಾಶ್ವತವಾಗಿ ಪ್ರದರ್ಶಿಸುವ ಕಾರ್ಯ ಮಾಡಲಾಗಿದೆ. ಎರಡು ತಿಂಗಳುಗಳಿಂದ ನಿರಂತರವಾಗಿ ಈ ಕಾರ್ಯದಲ್ಲಿ ತಂಡ ತೊಡಗಿಸಿಕೊಂಡಿದೆ.
೧೨ ಕಲಾವಿದರು ಮೂರು ದಿನಗಳ ಕಾಲ ಗಾಳಿಪಟದಲ್ಲಿ ಚಿತ್ರ ರಚನೆ ಕಾರ್ಯ ನಡೆಸಿದ್ದಾರೆ. ತುಳುನಾಡಿನ ದೈವಾರಾಧನೆ, ಗಣಪತಿ ಸೇರಿದಂತೆ ಅನೇಕ ಚಿತ್ರಗಳನ್ನು ಒಳಗೊಂಡ ವಿವಿಧ ಆಕಾರಗಳ ಗಾಳಿಪಟಗಳನ್ನು ಟೀಂ ಮಂಗಳೂರು ತಂಡ ಪ್ರದರ್ಶಿಸಿದೆ. ವಿದ್ಯಾರ್ಥಿಗಳಿಗೂ ತರಬೇತಿ ನೀಡಿ ವಿದ್ಯಾರ್ಥಿಗಳ ಮೂಲಕವೂ ಗಾಳಿಪಟ ರಚಿಸುವ ಕಾರ್ಯವನ್ನು ಕಲಾವಿದರ ತಂಡ ಯಶಸ್ವಿಯಾಗಿ ಮಾಡುತ್ತಿದೆ.