September 14, 2026
Monday, September 14, 2026
spot_img

ಜಮೀರ್ ಆಸ್ತಿ ಕೇಸ್ ಟ್ವಿಸ್ಟ್: ಚಾರ್ಜ್‌ಶೀಟ್‌ಗೆ ರೆಡಿಯಾದ ಲೋಕಾ; ರಾಜ್ಯಪಾಲರ ಗ್ರೀನ್ ಸಿಗ್ನಲ್‌ಗೆ ಕಾಯ್ದಿಟ್ಟ ತನಿಖಾ ವರದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧದ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರ ಅನುಮತಿಗಾಗಿ ಲೋಕಾಯುಕ್ತ ಕಾಯುತ್ತಿದೆ.

ಈ ಕುರಿತು ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ರಾಜಭವನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಮುಂದೆ ರಾಜ್ಯಪಾಲರ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

 ಎಸ್‌ಪಿ ವರ್ಗಾವಣೆ ಹಿಂದೆ ‘ಕಾಣದ ಕೈ’ ಆರೋಪ ತಳ್ಳಿಹಾಕಿದ ಲೋಕಾಯುಕ್ತರು

ಜಮೀರ್ ಅಹ್ಮದ್ ಪ್ರಕರಣದ ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಎಸ್‌ಪಿ (SP) ಯನ್ನು ದಿಢೀರನೆ ವರ್ಗಾವಣೆ ಮಾಡಿರುವುದರ ಹಿಂದೆ ರಾಜಕೀಯ ಒತ್ತಡ ಹಾಗೂ ಸರ್ಕಾರದ ‘ಕಾಣದ ಕೈಗಳು’ ಕೆಲಸ ಮಾಡಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಈ ವಿವಾದಕ್ಕೆ ಲೋಕಾಯುಕ್ತರು ಪ್ರತಿಕ್ರಿಯಿಸಿ, ಅದೆಲ್ಲಾ ಬರೀ ಸುಳ್ಳು. ಕಥೆ ಕಟ್ಟಿಕೊಳ್ಳುವವರು ಏನಾದರೂ ಕಥೆ ಕಟ್ಟಿಕೊಳ್ಳಬಹುದು. ಸಾರ್ವಜನಿಕ ಸೇವೆಗೆ ಬಂದ ಮೇಲೆ ವರ್ಗಾವಣೆ ಎಂಬುದು ಸಹಜ ಪ್ರಕ್ರಿಯೆ. ಅದನ್ನು ಇನ್ಸಿಡೆಂಟ್ಸ್ ಆಫ್ ಸರ್ವಿಸ್ ಎನ್ನಲಾಗುತ್ತದೆ. ಕೇವಲ ಆಡಳಿತಾತ್ಮಕ ಕಾರಣಗಳಿಗಾಗಿ ವರ್ಗಾವಣೆಗಳನ್ನು ಮಾಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:

ಇಲಾಖೆಯ ಹಿತದೃಷ್ಟಿ ಮತ್ತು ಆಡಳಿತಾತ್ಮಕ ಅನುಕೂಲಗಳನ್ನು ನೋಡಿಕೊಂಡು ಯಾರನ್ನು ಎಲ್ಲಿಗೆ ನಿಯೋಜಿಸಬೇಕು ಅಥವಾ ಮೂಲ ಇಲಾಖೆಗೆ ಮರಳಿ ಕಳುಹಿಸಬೇಕೇ ಎಂಬುದನ್ನು ಸಂಸ್ಥೆಯೇ ನಿರ್ಧರಿಸಲಿದೆ. ಈ ವಿಷಯದ ಬಗ್ಗೆ ಅನಗತ್ಯ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜಭವನದಿಂದ ಅನುಮತಿ ಸಿಕ್ಕ ತಕ್ಷಣ ಸಚಿವ ಜಮೀರ್ ಅಹ್ಮದ್ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಕ್ರಿಮಿನಲ್ ವಿಚಾರಣೆ ಆರಂಭವಾಗಲಿದ್ದು, ಈ ನಿರ್ಧಾರ ಸಚಿವರ ರಾಜಕೀಯ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !