ಕಾಶ್ಮೀರದಲ್ಲಿ ನಾಪತ್ತೆಯಾಗಿದ್ದ ಬಿಜೆಪಿ ನಾಯಕ ಶವವಾಗಿ ಪತ್ತೆ: ಕೊಲೆ ಶಂಕೆ

ಹೊಸಗಿದಂತ ಡಿಜಿಟಲ್‌ ಡೆಸ್ಕ್
ಆಘಾತಕಾರಿ ಘಟನೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕನ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿಜೆಪಿ ನಾಯಕ ಕೆಲ ಸಮಯದ ಹಿಂದೆ ನಾಪತ್ತೆಯಾಗಿದ್ದು, ಕಥುವಾ ಹೀರಾನಗರ ಟೌನ್ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದೆ.
ಆತನನ್ನು ನೇಣಿಗೇರಿಸುವುದರ ಹಿಂದಿನ ನಿಖರವಾದ ಕಾರಣ ಮತ್ತು ಘಟನೆಯ ವಿವರಗಳು ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ನಿಖರವಾದ ಕಾರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಹೀರಾನಗರ ಪಟ್ಟಣದಲ್ಲಿರುವ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಬಿಜೆಪಿ ಮುಖಂಡ ಸೋಮ್ ರಾಜ್ ಅವರ ಶವ ಮರಕ್ಕೆ ನೇತಾಡುತ್ತಿರುವುದನ್ನು ಗ್ರಾಮಸ್ಥರು ಬೆಳಿಗ್ಗೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಮೃತದೇಹವು ರಕ್ತದ ಗುರುತುಗಳೊಂದಿಗೆ ಪತ್ತೆಯಾಗಿದ್ದು, ಸಮೀಪದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೂಲಗಳ ಪ್ರಕಾರ, ಬಿಜೆಪಿ ನಾಯಕ ಸೋಮಿ ರಾಜ್ ಸೋಮವಾರ ನಾಪತ್ತೆಯಾಗಿದ್ದು, ಮಂಗಳವಾರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ಹೀರಾನಗರ ಪೊಲೀಸರು ಸೆಕ್ಷನ್ 174 ಸಿಆರ್‌ಪಿಸಿ ಅಡಿಯಲ್ಲಿ ವಿಚಾರಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ.
ಅವರ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಹಾಗೂ ಬಿಜೆಪಿಯ ಹಲವು ಮುಖಂಡರು ಆಗ್ರಹಿಸಿದ್ದಾರೆ. ವೈದ್ಯಕೀಯ ಮತ್ತು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಮೃತರ ದೇಹವನ್ನು ಅಂತಿಮ ವಿಧಿಗಳಿಗಾಗಿ ಕಾನೂನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ಬಗ್ಗೆ ತನಿಖೆ ನಡೆಸಲು ಎಸ್‌ಡಿಪಿಒ ಬಾರ್ಡರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಥುವಾ ಆರ್‌ಸಿ ಕೊತ್ವಾಲ್ ಹೇಳಿದ್ದಾರೆ. “ಕುಟುಂಬದವರು ಶಂಕಿಸಿರುವ ನಾಯಕರನ್ನು ಸಹ ವಿಚಾರಣೆ ನಡೆಸಲಾಗುವುದು ಮತ್ತು ಯಾರೇ ತಪ್ಪಿತಸ್ಥರು ಎಂದು ಕಂಡುಬಂದರೂ ನಿರ್ಧಾಕ್ಷಿಣ್ಯವಾಗಿ ವ್ಯವಹರಿಸಲಾಗುವುದು” ಎಂದು ಎಸ್‌ಎಸ್‌ಪಿ ಪ್ರತಿಪಾದಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ನಾಯಕರೊಬ್ಬರನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲಲ್ಲ. ಮಾಧ್ಯಮ ವರದಿಗಳ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಕಣಿವೆಯಲ್ಲಿ 23 ಕ್ಕೂ ಹೆಚ್ಚು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!