ಪಂಡಿತರ ಮೇಲಿನ ದೌರ್ಜನ್ಯ, ಆಕ್ರಂದನಗಳನ್ನು ತೆರೆದಿಡುತ್ತಿದೆ ಕಾಶ್ಮೀರಿ ಪೊಲೀಸರ ʻದಿ ಅನ್‌ಟೋಲ್ಡ್‌ ಕಾಶ್ಮೀರಿ ಫೈಲ್ಸ್‌ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ವಲಸೆ ಕುರಿಯಾದ ನೈಜ ಘಟನೆಗಳಾಧಾರಿತ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಕೆಲವು ಐತಿಹಾಸಿಕ ಕಹಿ ಸತ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವುದರ ಜೊತೆಗೆ ಕೆಲವು ಪರ-ವಿರೋಧ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇಷ್ಟು ವರ್ಷಗಳ ಕಾಲ ಬಚ್ಚಿಟ್ಟಿದ್ದ ಕಾಶ್ಮೀರದ ಭಯಾನಕ ಇತಿಹಾಸವನ್ನು, ಸುಳ್ಳುಗಳ ಹಿಂದೆ ಮರೆಯಾಗಿದ್ದ ನಗ್ನ ಸತ್ಯಗಳನ್ನು ಚಿತ್ರವು ಸಮಾಜದ ಮುಂದೆ ತೆರೆದಿಟ್ಟಿದೆ.
ಕಾಶ್ಮೀರಿ ಫೈಲ್ಸ್‌ ಚಿತ್ರ ಬಿಡುಗಡೆಯಾದ ನಂತರ ದೇಶಾದ್ಯಂತ ಸಂಚಲನಗಳು ಸೃಷ್ಟಿಯಾಗಿದೆ. ಪಂಡಿತರ ಮೇಲಿನ ದೌರ್ಜನ್ಯಗಳಿಗೆ ಜನರು ಕಣ್ಣೀರಾಗಿದ್ದಾರೆ. ಮತಾಂದರ ಸ್ವರ್ಗವಾಗಿದ್ದ ಕಾಶ್ಮೀರದಲ್ಲಿ ಮೂಲನಿವಾಸಿಗಳಾಗಿದ್ದ ಪಂಡಿತರಿಗೆ ಮತ್ತೆ ನೆಲೆ ಕಲ್ಪಿಸುವ ಕೆಲಸಗಳಾಗುತ್ತಿವೆ. ಈ ಚಿತ್ರದ ಮೂಲಕ ಜನರಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಅರಿವುಂಟಾಗುತ್ತಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ʻದಿ ಅನ್‌ಟೋಲ್ಡ್‌ ಕಾಶ್ಮೀರಿ ಫೈಲ್ಸ್‌ʼ ಎನ್ನುವ 57 ಸೆಕೆಂಡ್‌ಗಳಿರುವ ವಿಡಿಯೋವನ್ನು ಶೇರ್‌ ಮಾಡುವ ಮೂಲಕ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲಿದೆ.
ಮಾರ್ಚ್‌ 31ರಂದು ಕಾಶ್ಮೀರ ಪೊಲೀಸರ ಅಧಿಕೃತ ಟ್ವಿಟ್ಟರ್‌ ಖಾತೆಯಿಂದ ಈ ವಿಡಿಯೋ ಹರಿಬಿಡಲಾಗಿದೆ. ಕಾಶ್ಮೀರಿ ಪಂಡಿತರು, ಮಹಿಳೆಯರು, ಮಕ್ಕಳು ಸೇರಿದಂತೆ ಕಾಶ್ಮೀರ ಜನತೆ ಮೇಲೆ ಉಗ್ರರು ನೀಡಿದ ಕಿರುಕುಳದ ಬಗ್ಗೆ ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ.
ಈ ಕಿರುಚಿತ್ರದಲ್ಲಿ ಏನೂ ಮಾಡಲಾಗದೆ ರಸ್ತೆಯಲ್ಲಿ ನಿಂತು ಮಹಿಳೆಯರು ಗೋಳಾಡುತ್ತಿರುವ ದೃಶ್ಯ, ಮಿತಿಮೀರಿದ ಉಗ್ರರ ಅಟ್ಟಹಾಸದ ಜೊತೆಗೆ ಕಾಶ್ಮೀರಿ ಪಂಡಿತರ ಸಾವು-ನೋವುಗಳು. ವಲಸೆ ಹೋಗುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋಗೆ ಹಿನ್ನೆಲೆ ಥೀಮ್‌ ಸಾಂಗ್‌ ಆಗಿ ಕವಿ ಫೈಜ್ ಅಹ್ಮದ್ ಫೈಜ್ ಅವರ ‘ಹಮ್ ದೇಖೇಂಗೆ’ ಹಾಡಿನ ಮೂಲಕ ಚಿತ್ರೀಕರಿಸಿದ್ದಾರೆ. ಈ ಹಾಡನ್ನು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿಯೂ ಬಳಸಿದ್ದಾರೆ.

 

ಈ ವಿಡಿಯೋದಲ್ಲಿ ಉಗ್ರಗಾಮಿಗಳು ಎಸ್‌ಪಿಒ ಇಶ್ಫಾಕ್ ಅಹ್ಮದ್ ಹಾಗೂ ಅವರ ಸಹೋದರ ಉಮರ್ ಜಾನ್ ಅವರನ್ನು ಕೊಲೆ ಮಾಡಿದ್ದಾರೆ. ಈ ಹತ್ಯೆಗಳು ಶಾಂತಿಪ್ರಿಯ ಕಾಶ್ಮೀರಿಗಳ ಸರಣಿ ಕೊಲೆಗೆ ಸಾಲಿಗೆ ಸೇರಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಹತ್ಯೆಗಳ ಬಗ್ಗೆ ಹೇಳುತ್ತಾ, ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ನಡೆದ ಹತ್ಯೆಯಲ್ಲಿ 20,000ಮಂದಿ ಅಮಾಯಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ಹೀಗೆ ಇದ್ದರೆ ಮತ್ತಷ್ಟು ಬಲಿಯಾಗುವುದು ಖಂಡಿತ. ಇದೀಗ ನಾವು ಮಾತನಾಡುವ ಸಮಯ ಬಂದಿದೆ ಎಂಬ ಮತ್ತೊಂದು ಸಾಲು ಕೂಡ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!