ಜಾಮ್‌ನಗರದಲ್ಲಿ ಸ್ಥಾಪನೆಯಾಗಲಿದೆ ಡಬ್ಲ್ಯುಎಚ್‌ಒ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಗುಜರಾತ್‌ನ ಜಾಮ್ ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ (ಜಿಸಿಟಿಎಂ) ಸ್ಥಾಪನೆ ಆಗಲಿದೆ. ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಭಾರತ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ನಡುವೆ ಹೋಸ್ಟ್ ಕಂಟ್ರಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಜಿಸಿಟಿಎಂ ಸ್ಥಾಪನೆಗೆ ಅನುಮೋದನೆ ನೀಡಿದೆ.

ಜಾಮ್ ನಗರದಲ್ಲಿ ಆಯುಷ್ ಸಚಿವಾಲಯದ ಅಡಿಯಲ್ಲಿ ಸ್ಥಾಪನೆಯಾಗುವ ಡಬ್ಲ್ಯುಎಚ್‌ಒ ಜಿಸಿಟಿಎಂ ಪ್ರಪಂಚದಾದ್ಯಂತ ಸಾಂಪ್ರದಾಯಿಕ ವೈದ್ಯಕೀಯಕ್ಕೆ ಮೊದಲ ಮತ್ತು ಏಕೈಕ ಜಾಗತಿಕ ಔಟ್ ಪೋಸ್ಟ್ ಕೇಂದ್ರವಾಗಿದೆ.

ಡಬ್ಲ್ಯುಎಚ್‌ಒ ಜಿಸಿಟಿಎಂ ಪ್ರಯೋಜನಗಳು:

  • ಜಗತ್ತಿನಾದ್ಯಂತ ಆಯುಷ್ ವ್ಯವಸ್ಥೆಗಳನ್ನು ವಿಸ್ತರಿಸಲು.
  • ಸಾಂಪ್ರದಾಯಿಕ ವೈದ್ಯಕ್ಕೆ ಸಂಬಂಧಿಸಿದ ಜಾಗತಿಕ ಆರೋಗ್ಯ ವಿಷಯಗಳಲ್ಲಿ ನಾಯಕತ್ವ ಒದಗಿಸಲು.
  • ಸಾಂಪ್ರದಾಯಿಕ ವೈದ್ಯದ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ, ಪ್ರವೇಶ ಮತ್ತು ತರ್ಕಬದ್ಧ ಬಳಕೆಯನ್ನು ಖಚಿತಪಡಿಸಿಕೊಳ್ಳಲು.
  • ಸಂಬಂಧಿತ ತಾಂತ್ರಿಕ ಕ್ಷೇತ್ರಗಳು, ಪರಿಕರಗಳು ಮತ್ತು ವಿಧಾನಗಳಲ್ಲಿ ರೂಢಿಗಳು, ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು ಹಾಗೂ ವಿಶ್ಲೇಷಣೆಯನ್ನು ಕೈಗೊಳ್ಳಲು ಡೇಟಾ ಸಂಗ್ರಹಿಸಲು ಮತ್ತು ಪ್ರಭಾವವನ್ನು ನಿರ್ಣಯಿಸಲು.
  • ಡಬ್ಲ್ಯುಎಚ್‌ಒ ಅಕಾಡೆಮಿ ಮತ್ತು ಇತರ ಕಾರ್ಯತಂತ್ರದ ಪಾಲುದಾರರೊಂದಿಗೆ ಸಹಭಾಗಿತ್ವದ ಮೂಲಕ ಉದ್ದೇಶಗಳಿಗೆ ಪಸ್ತುತವಾಗಿರುವ ಕ್ಷೇತ್ರಗಳಲ್ಲಿ ನಿರ್ದಿಷ್ಟ ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಹಾಗೂ ಕ್ಯಾಂಪಸ್, ವಸತಿಗಳಲ್ಲಿ ಅಥವಾ ವೆಬ್ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘ್ಬೆರೆಯೆಸಸ್ ಅವರು 2020ರ ನವೆಂಬರ್ 13ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಭಾರತದಲ್ಲಿ ಡಬ್ಲ್ಯುಎಚ್‌ಒ ಜಿಸಿಟಿಎಂ ಸ್ಥಾಪನೆಯನ್ನು ಘೋಷಿಸಿದ್ದರು. ಈ ಕೇಂದ್ರದ ಸ್ಥಾಪನೆಗಾಗಿ ಚಟುವಟಿಕೆಗಳ ಸಮನ್ವಯ, ಕಾರ್ಯಗತಗೊಳಿಸುವಿಕೆ ಮತ್ತು ಮೇಲ್ವಿಚಾರಣೆಗಾಗಿ ಜಂಟಿ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಪಡೆ ಭಾರತ ಸರಕಾರ, ಪರ್ಮನೆಂಟ್ ಮಿಷನ್ ಆ್ ಇಂಡಿಯಾ, ಜಿನೀವಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳನ್ನು ಒಳಗೊಂಡಿದೆ.

ಡಬ್ಲ್ಯುಎಚ್ಒ ಜಿಸಿಟಿಎಂ ಸಾಂಪ್ರದಾಯಿಕ ಔಷಧಕ್ಕೆ ಸಂಬಂಧಿಸಿದ ಎಲ್ಲಾ ಜಾಗತಿಕ ಆರೋಗ್ಯ ವಿಷಯಗಳ ಮೇಲೆ ನಾಯಕತ್ವವನ್ನು ಒದಗಿಸುತ್ತದೆ ಮತ್ತು ಸಾಂಪ್ರದಾಯಿಕ ಔಷಧ ಸಂಶೋಧನೆ, ಅಭ್ಯಾಸಗಳು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ನೀತಿಗಳನ್ನು ರೂಪಿಸುವಲ್ಲಿ ಸದಸ್ಯ ರಾಷ್ಟ್ರಗಳಿಗೆ ಬೆಂಬಲವನ್ನು ನೀಡುತ್ತದೆ.

ಆಯುಷ್ ಸಚಿವಾಲಯವು ಆಯುರ್ವೇದ ಮತ್ತು ಯುನಾನಿ ಪದ್ಧತಿಯ ತರಬೇತಿ ಮತ್ತು ಅಭ್ಯಾಸದ ಕುರಿತು ಮಾನದಂಡಗಳ ದಾಖಲೆಗಳನ್ನು ಅಭಿವೃದ್ಧಿಪಡಿಸುವುದು, ರೋಗಗಳ ಅಂತಾರಾಷ್ಟ್ರೀಯ ವರ್ಗೀಕರಣ -11ರ ಸಾಂಪ್ರದಾಯಿಕ ಔಷಧದ ಅಧ್ಯಾಯದಲ್ಲಿ ಎರಡನೇ ಮದರಿಯನ್ನು ಪರಿಚಯಿಸುವುದು, ಎಂ-ಯೋಗದಂತಹ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಅನೇಕ ರಂಗಗಳಲ್ಲಿ ಡಬ್ಲ್ಯುಎಚ್‌ಒನೊಂದಿಗೆ ಸಹಯೋಗ ಹೊಂದಿದೆ. ಇಂಟರ್‌ನ್ಯಾಷನಲ್ ಫಾರ್ಮಾಕೋಪಿಯಾ ಆಫ್ ಹರ್ಬಲ್ ಮೆಡಿಸಿನ್ (ಐಪಿಎಚ್‌ಎಂ) ಮತ್ತು ಇತರ ಸಂಶೋಧನಾ ಅಧ್ಯಯನಗಳು ಇತ್ಯಾದಿಗಳ ಕೆಲಸವನ್ನು ಬೆಂಬಲಿಸುತ್ತದೆ.

ಸಾಂಪ್ರದಾಯಿಕ ವೈದ್ಯಕೀಯ ಆರೋಗ್ಯ ರಕ್ಷಣೆಯ ವಿತರಣಾ ವ್ಯವಸ್ಥೆಗಳ ಪ್ರಮುಖ ಆಧಾರವಾಗಿದೆ. ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 2030ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ ಜಗತ್ತು ಹತ್ತು ವರ್ಷಗಳ ಮೈಲಿಗಲ್ಲನ್ನು ಸಮೀಪಿಸುತ್ತಿರುವಾಗ ಎಲ್ಲಾ ಜನರಿಗೆ ಗುಣಮಟ್ಟದ ಅಗತ್ಯ ಆರೋಗ್ಯ ಸೇವೆಗಳು ಮತ್ತು ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಅಗತ್ಯ ಔಷಧಿಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳುವಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಸಾಂಪ್ರದಾಯಿಕ ಔಷಧವು ಮಹತ್ವದ ಪಾತ್ರ ವಹಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!