ಹೊಸದಿಗಂತ ವರದಿ ಬಳ್ಳಾರಿ:
ಜನಾರ್ದನ ರೆಡ್ಡಿ ಹಾಗೂ ಸೋದರ ಸೋಮಶೇಖರ ರೆಡ್ಡಿ ನಡುವೆ ರಾಜಕೀಯ ಬಿರುಕಿದೆ ಎನ್ನುವುದು ಎಲ್ಲರಿಗೂ ತಿಳಿದದ್ದೇ . ಇದೀಗ ಚುನಾವಾಣೆ ಮುಗಿದ ನಂತರ ಜನಾರ್ದನ ರೆಡ್ಡಿ ಮೇಲೆ ವಾಗ್ದಾಳಿ ನಡೆಸಿರುವ ಸೋಮಶೇಖರ ರೆಡ್ಡಿ, ಸಹೋದರ ಗಾಲಿ ಜನಾರ್ಧನ ರೆಡ್ಡಿ ಎದುರು ಯಾರೂ ಬೆಳೆಯಬಾರದು, ಅವರೇ ಬೆಳೆಸ್ತಾರೆ. ಎದುರಾದರೇ ಕುತಂತ್ರ ಬುದ್ದಿಯಿಂದ ಕಟ್ಟಿ ಹಾಕ್ತಾರೆ. ಈಗಲ್ಲ ಸಣ್ಣವನಿಂದಾಗಲೇ ಇದೇ ಬುದ್ದಿ ಅವರದ್ದು, ನಮ್ಮವರು ಅವರ ಆಮೀಷಕ್ಕೆ ಒಳಗಾದ್ರು, ಚುನಾವಣೆ ಅಂದ್ಮೇಲೆ ಸೋಲು ಗೆಲವು ಸಹಜ. ಆದರೆ ಎಲ್ಲರೂ ಸೇರಿ ಜನಾರ್ಧನ ರೆಡ್ಡಿಯನ್ನು ರಾಜಕೀಯವಾಗಿ ಕಟ್ಟಿ ಹಾಕ್ತೇವೆ, ಸುಮ್ಮನೆ ಕೂಡುವ ಜಾಯಮಾನ ನಮ್ಮದಲ್ಲ ಎಂದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಕಳೆದ ಚುನಾವಣೆಯಲ್ಲಿ ಸಹೋದರ ರೆಡ್ಡಿ ನಮ್ಮವರಿಗೆ ನಾನಾ ಆಮಿಷ ಒಡ್ಡಿದ ಹಿನ್ನೆಲೆಯಲ್ಲಿ ಬಹುತೇಕರು ಕೆಆರ್ ಪಿಪಿ ಪರ ಕೆಲಸ ಮಾಡಿದ್ರು, ಇದರಿಂದಲೇ ನನ್ನ ಸೋಲಾಯ್ತು, ಜೊತೆಗೆ ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿ ಆಮೀಷವೂ ಕೆಲಸ ಮಾಡಿತು. ಬಳ್ಳಾರಿಯ ನನ್ನ ಜನ ಇರೋವರೆಗೂ ಹೆದರುವ ಮಾತೇ ಇಲ್ಲ, ಮತ್ತೆ ಪಕ್ಷವನ್ನು ತಳಮಟ್ಟದಿಂದ ಕಟ್ತೇನೆ, ಮತ್ತೆ ಕಮಲವನ್ನು ಅರಳಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಬೆಳೆಸಿದ ಹೇಡಿಗಳು ಮನೆಯಲ್ಲಿ ಕೂತ್ರು, ನಾನು ವಿಧಾನಸೌಧಕ್ಕೆ ಬಂದಿರುವೆ ಎಂದು ಜನಾರ್ಧನ ರೆಡ್ಡಿ ದರ್ಪದಿಂದ ಹೇಳ್ತಾರೆ, ಇದು ಯಾರಿಗೂ ಶಾಶ್ವತವಲ್ಲ. ಸಹೋದರ ಜನಾರ್ಧನರೆಡ್ಡಿ ನನ್ನ ಅಡ್ಡ ಇಟ್ಟು ಅಕ್ರಮವಾಗಿ ಸಾಕಷ್ಟು ದುಡ್ಡು ಮಾಡಿದ, ಯಾರೇ ಇರಲಿ ಅವರು ಹೇಳಿದ ಹಾಗೇ ಕೇಳದಿದ್ದರೇ ಎಲ್ಲರಿಗೂ ಇದೇ ಗತಿ ಬರಲಿದೆ. ಸಣ್ಣವನಿಂದಾಗಲೇ ಇದೇ ಬುದ್ದಿ ಅವರದ್ದು, 5 ವರ್ಷ ಪಕ್ಷವನ್ನು ಸಂಘಟಿಸುವೆ, ಮತ್ತೆ ಕಮಲ ಅರಳಿಸುವೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿ ಗೆಲ್ಲಿತು, ನಮ್ಮ ಅಭಿವೃದ್ಧಿ ಸೋತಿದೆ. ಬಿ.ಎಸ್.ಯಡಿಯೂರಪ್ಪ, ಬಿ.ಶ್ರೀರಾಮುಲು ಇಮೇಜ್ ಮುಂದೆ ಜನಾರ್ಧನರೆಡ್ಡಿ ಏನೂ ಅಲ್ಲ ಎಂದರು.