ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಸೇನಾ ಪಕ್ಷದ ಮುಖಂಡನ ಮೇಲೆ ತಡರಾತ್ರಿ ಕಲ್ಲು, ದೊಣ್ಣೆಗಳಿಂದ ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನಲ್ಲಿ ನಡೆದಿದೆ.
ಪಕ್ಷದ ಮುಖಂಡ ಕೋತಿರೆಡ್ಡಿ ರಾಜಾರೆಡ್ಡಿ ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಕೆಲ ಯುವಕರು ಕಾರನ್ನು ಸುತ್ತುವರಿದು ದೊಣ್ಣೆ, ಕಲ್ಲುಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಕೋತಿರೆಡ್ಡಿ ರಾಜಾರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ರಾಜ ರೆಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜನಸೇನಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಲಕಂ ಮಧುಸೂದನ್ ರೆಡ್ಡಿ ಆಸ್ಪತ್ರೆಗೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿದರು. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮಧುಸೂದನ್ ರೆಡ್ಡಿ, ಸ್ಥಳೀಯ ಎಂಎಲ್‌ಎ ಕೇತಿರೆಡ್ಡಿ ಕುಮ್ಮಕ್ಕಿನಿಂದಲೇ ಇದೆಲ್ಲಾ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಅಲ್ಲದೇ ರಾಜಾ ರೆಡ್ಡಿ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದರು.