ಜನೋತ್ಸವ ಮುಂದಿನ ಚುನಾವಣೆಯ ದಿಕ್ಸೂಚಿ: ನಳಿನ್‍ಕುಮಾರ್ ಕಟೀಲ್

ಹೊಸ ದಿಗಂತ ವರದಿ, ಬೆಂಗಳೂರು:

ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ಜನೋತ್ಸವ ನಡೆಯಲಿದೆ. ಅದು ಮುಂದಿನ ಚುನಾವಣೆಯ ದಿಕ್ಸೂಚಿ ಎನಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ದೊಡ್ಡಬಳ್ಳಾಪುರದಲ್ಲಿ ನಡೆಯುವ ಬೃಹತ್ rally  ಅಂಗವಾಗಿ ಇಂದು ನಡೆದ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಬಿಜೆಪಿ ಸರಕಾರ ಮೂರು ವರ್ಷಗಳ ಅಧಿಕಾರಾವಧಿ ಪೂರೈಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಒಂದು ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ನಡೆಯುವ ಸಮಾವೇಶದಲ್ಲಿ ಸಂದೇಶ ನೀಡಲು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬರಲಿದ್ದಾರೆ ಎಂದು ಪ್ರಕಟಿಸಿದರು.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದ ಎಲ್ಲ ಕಾರ್ಯಕರ್ತರಿಗೆ ಇದೊಂದು ಸಂತಸದ ವಿಚಾರ; ಪ್ರೇರಣೆಯ ವಿಚಾರ ಎಂದು ನುಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಣ್ಣ ‘ಜನ ಸೇರಿಸಿ’ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದೊಂದು ಸವಾಲಿನ ನಡುವೆ ಜನೋತ್ಸವ ನಡೆಯಲಿದೆ. ಅದು ಸಿದ್ದರಾಮಣ್ಣನ ಉತ್ಸವವಾದರೆ ಇದು ಜನರ ಪ್ರೇರಣೆಯಿಂದ ನಡೆಯುವ ಉತ್ಸವ ಎಂದು ವಿಶ್ಲೇಷಿಸಿದರು. ಇಲ್ಲಿನ ಜನೋತ್ಸವದಿಂದ ಪ್ರಾರಂಭಿಸಿ 7 ಕಾರ್ಯಕ್ರಮ ನಡೆಸಲು ತೀರ್ಮಾನ ಮಾಡಲಾಗಿದೆ. ಸೆ.2ರಂದು ಪ್ರಧಾನಿಯವರ ಕಾರ್ಯಕ್ರಮವಿತ್ತು. ಅದು ಅಭೂತಪೂರ್ವವಾಗಿ ಯಶಸ್ವಿಯಾಗಿ ನಡೆದಿದೆ ಎಂದು ವಿವರಿಸಿದರು.
130 ಎಕರೆ ಜಾಗದಲ್ಲಿ ಪ್ರಧಾನಿಯವರ ಕಾರ್ಯಕ್ರಮ ನಡೆಯಿತು. ಕಡಿಮೆ ಅವಧಿ ಮತ್ತು ತಯಾರಿಯ ನಡುವೆ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಕಾರ್ಯಕ್ರಮ ನಡೆದಿದೆ. ಬೆಳಿಗ್ಗೆ 9 ಗಂಟೆಗೇ ಕುರ್ಚಿಗಳು ಭರ್ತಿ ಆಗಿದ್ದವು. ಮೋದಿಯವರ ಭಾಷಣ ಮುಗಿಯುವವರೆಗೆ ಕಾರ್ಯಕರ್ತರು, ಜನರು ಎದ್ದಿರಲಿಲ್ಲ. 20 ಗಂಟೆಗಳ ಕಾಲ ಅವರು ಬಿಜೆಪಿಗಾಗಿ ಸಮಯ ಮೀಸಲಿಟ್ಟರು. ಅದು ಜನರನ್ನು ಕರೆತಂದ ಸಭೆ ಅಲ್ಲ. ಕರೆತಂದಿದ್ದರೆ ಅವರು ಬಾರಿಗೋ, ಮದ್ಯದಂಗಡಿಗೋ, ಊಟ ಹುಡುಕಿಕೊಂಡೋ ಹೊರಗಡೆ ಇರುತ್ತಿದ್ದರು. ಅದು ಜನಪ್ರೇರಣೆಯ ಕಾರ್ಯಕ್ರಮವಾಗಿತ್ತು ಎಂದು ನುಡಿದರು.
ಕರ್ನಾಟಕವನ್ನು ಉಳಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಭಾವನೆ ಜನರಲ್ಲಿದೆ. ರಾಜ್ಯ ಮತ್ತು ದೇಶಕ್ಕೆ ಏಕೈಕ ನಾಯಕರು ನರೇಂದ್ರ ಮೋದಿ ಎಂಬ ಭಾವನೆ ಜನರದು. ರಾಜ್ಯದ ಜನರನ್ನು ಮುಟ್ಟುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕಿದೆ ಎಂದು ತಿಳಿಸಿದರು. ಮಂಗಳೂರಿನವರನ್ನು ಸೋಲಿಸಲು 4 ಲಕ್ಷ ಜನರನ್ನು ಸೇರಿಸಿ ಇಲ್ಲಿ ದೊಡ್ಡ ರ್ಯಾಲಿ ಆಯೋಜಿಸಿ ಎಂದು ಸವಾಲೆಸೆದರು.
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150 ಸ್ಥಾನ ನಮ್ಮದಾಗಲಿದೆ ಎಂದು ಎದೆತಟ್ಟಿ ಹೇಳುವುದಾಗಿ ಚಪ್ಪಾಳೆಗಳ ನಡುವೆ ತಿಳಿಸಿದರು. ಜನೋತ್ಸವಕ್ಕೆ ಜನರು ಬರುವ ವಿಶ್ವಾಸ ನಿಮ್ಮದಿರಲಿ ಎಂದು ಅವರು ನಗುತ್ತಲೇ ಸವಾಲು ಎಸೆದರು. ಕಾರ್ಯಕರ್ತರನ್ನು ಸೇರಿಸಲು ಜೋಶ್ ಇರಬೇಕು. ಇಲ್ಲವಾದರೆ ಅದು ಸಿದ್ದರಾಮಣ್ಣನ ಕಾರ್ಯಕ್ರಮವಾಗುತ್ತದೆ ಎಂದು ತಿಳಿಸಿದರು.
ಸಿದ್ದರಾಮಣ್ಣನ ಕಾರ್ಯಕ್ರಮ ಅವ್ಯವಸ್ಥೆಯ ಭಾಗವಾಗಿತ್ತು ಎಂದು ಟೀಕಿಸಿದ ಅವರು, ಫಲಾನುಭವಿಗಳಿಗೆ ನಮ್ಮ ಸರಕಾರದ ಬಗ್ಗೆ ಪ್ರೀತಿ ಇದೆ. ಅಭಿಮಾನವೂ ಇದೆ. ಅದನ್ನು ಬಳಸಿಕೊಳ್ಳಿ ಎಂದು ಸೂಚಿಸಿದರು. ಸರಕಾರದ ಯೋಜನೆ, ಸಾಧನೆಯನ್ನು ತಿಳಿಸುವ ಕಾರ್ಯಕ್ರಮ ಜನೋತ್ಸವ ಎಂದ ಅವರು, ಇದು ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ನುಡಿದರು.
ಜುಲೈ 28ರಂದು ಜನೋತ್ಸವ ನಡೆಯಬೇಕಿತ್ತು. ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ಮುಂದೂಡಬೇಕಾಯಿತು. ಪೂರ್ಣ ವ್ಯವಸ್ಥೆ, ಪೂರ್ಣ ತಯಾರಿ, ಸಿದ್ಧತಾ ಸಭೆಗಳು ನಡೆದಿದ್ದವು. ಬಿಜೆಪಿ ಆಸ್ತಿ ಎನಿಸಿದ ಕಾರ್ಯಕರ್ತನ ಹತ್ಯೆ ಕಾರಣಕ್ಕಾಗಿ ದುಃಖದ ವಾತಾವರಣ ಇದ್ದುದರಿಂದ ಜನೋತ್ಸವವನ್ನು ಮುಂದೂಡಬೇಕಾಯಿತು ಎಂದರು.
ರಾಜ್ಯದ ಸಚಿವರಾದ ಡಾ. ಸುಧಾಕರ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಸಂಸದರಾದ ಮುನಿಸ್ವಾಮಿ, ಶಾಸಕರು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!