ಶ್ರೇಷ್ಠ ಬದುಕಿನ ಕಾರಣಕ್ಕೆ ಜಯಂತಿ ಆಚರಣೆ, ಆದರ್ಶ ಗುಣಗಳ ಮನನ: ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಬದುಕಿನ ಶ್ರೇಷ್ಠತೆಯ ಕಾರಣಕ್ಕೆ ಸಂತ ಸೇವಾಲಾಲ್, ಬಸವಣ್ಣ, ರವಿದಾಸ, ಡಾ. ಅಂಬೇಡ್ಕರ್, ನಾರಾಯಣಗುರು, ಕಬೀರರನ್ನು ನಾವು ನೆನಪಿಸಿ ಅವರ ಆದರ್ಶ ಗುಣಗಳನ್ನು ಮನನ ಮಾಡಿಕೊಳ್ಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಪ್ರಭಾರಿ ಸಿ.ಟಿ. ರವಿ ಹೇಳಿದ್ದಾರೆ.

ಬಿಜೆಪಿ ಎಸ್.ಸಿ. ಮೋರ್ಚಾ ವತಿಯಿಂದ ಸಂತ ರವಿದಾಸ ಅವರ ಜನ್ಮದಿನದ ಪ್ರಯುಕ್ತವಾಗಿ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರವಿದಾಸರನ್ನು ದೇವರೆಂದು ಉತ್ತರ ಭಾರತದಲ್ಲಿ ಪರಿಭಾವಿಸುತ್ತಾರೆ. ಇಲ್ಲಿ ಬಸವಣ್ಣ, ಕನಕದಾಸರು, ಪುರಂದರದಾಸರು ಮತ್ತು ಸರ್ವಜ್ಞರನ್ನು ನೋಡುವ ಹಾಗೆ ಅಲ್ಲಿ ರವಿದಾಸರಿಗೆ ವಿಶೇಷ ಸ್ಥಾನ ನೀಡುತ್ತಾರೆ. ಮಹಾನ್ ವ್ಯಕ್ತಿಗಳ, ಸಂತರ ಹಾಗೂ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಣೆಯು ನಮ್ಮ ಬದುಕಿಗೆ ಪ್ರೇರಣೆ ನೀಡಬೇಕು ಎಂದು ಆಶಿಸಿದರು.

ಭಕ್ತಿಯ ಮಾರ್ಗ ಹಿಡಿದು ಭಕ್ತಿ ಚಳವಳಿ ಆರಂಭಿಸಿದ ಸಂತ ರವಿದಾಸರು, ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸುವ ಆಶಯದೊಂದಿಗೆ ಸಾಮಾಜಿಕ ಸುಧಾರಣೆಯ ಹರಿಕಾರರಾಗಿ ಕೆಲಸ ಮಾಡಿದ್ದರು. ಇದರಿಂದ ಸಂತ ರವಿದಾಸರು ಇಂದಿಗೂ ಪೂಜಾರ್ಹರು ಎಂದು ವಿಶ್ಲೇಷಿಸಿದರು. ಹೇಗೆ ಡಾ. ಅಂಬೇಡ್ಕರರನ್ನು ಮಹಾರಾಷ್ಟ್ರಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲವೋ ಹಾಗೆ ಸಂತರಿಗೆ ಜಾತಿ, ಭಾಷೆ, ಪ್ರಾಂತ್ಯದ ಗೋಡೆ ಇರುವುದಿಲ್ಲ. ಬಸವಣ್ಣ, ಕನಕದಾಸರನ್ನು ಒಂದು ಜಾತಿಯ ಚೌಕಟ್ಟಿನೊಳಗೆ ಸೀಮಿತಗೊಳಿಸಿದರೆ ಅದು ಅವರ ವಿಚಾರಧಾರೆ, ಬೋಧನೆಗಳಿಗೆ ಮಾಡಿದ ಅಪಮಾನ ಎನಿಸುತ್ತದೆ ಎಂದು ತಿಳಿಸಿದರು.

ಸಮಾಜಮುಖಿ ರಾಜರನ್ನು ಮಾತ್ರ ನಾವು ನೆನಪಿಸಿಕೊಳ್ಳುತ್ತೇವೆ. ಹಾಗೆಯೇ ಒಳ್ಳೆಯದನ್ನು ಬಿಟ್ಟು ಹೋದ ಮತ್ತು ಸ್ವಾರ್ಥ ಮೀರಿ ಸಮಾಜಮುಖಿ ಕಾರ್ಯ ಮಾಡಿದವರನ್ನು ನಾವು ನೆನಪು ಮಾಡಿಕೊಳ್ಳುತ್ತೇವೆ. ಅದೇ ರೀತಿ ಸಂತ ರವಿದಾಸರನ್ನೂ ನೆನಪಿಸುತ್ತೇವೆ. ಪರಪೀಡನೆಯೇ ಪಾಪ. ಪರೋಪಕಾರದಿಂದ ಪುಣ್ಯ ಸಂಚಯ ಆಗುತ್ತದೆ. ಅದರಿಂದ ಸ್ವರ್ಗಕ್ಕೆ ಹೋಗಲು ಸಾಧ್ಯ ಎಂದು ಸಂತರು ಮಾರ್ಗದರ್ಶನ ಮಾಡಿದ್ದಾರೆ. ಜಾತಿ ಕಾರಣಕ್ಕೆ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಎಲ್ಲೂ ಹೇಳಿಲ್ಲ. ಬಸವಣ್ಣನಂತೆಯೇ ಕಾಯಕದ ಪ್ರೀತಿ- ಮಹತ್ವವನ್ನು ರವಿದಾಸರು ಪ್ರತಿಪಾದಿಸಿದ್ದರು. ಯಾವುದೇ ಕಸುಬು ಕೀಳಲ್ಲ ಎಂಬ ವಿಷಯವನ್ನು ಜನರಿಗೆ ತಿಳಿಸಿದ್ದರು ಎಂದು ಸಿ.ಟಿ. ರವಿ ತಿಳಿಸಿದರು.

ವಿಚಾರದ ಚಿಂತನೆಗಾಗಿ ಮಹಾತ್ಮರ ಜಯಂತಿಯನ್ನು ಆಚರಿಸಬೇಕು. ಶಿಕ್ಷಣ- ಪ್ರಶ್ನಿಸುವ ಮನೋಭಾವದಿಂದ ಸಂಘಟನೆಯನ್ನು ಬಲಪಡಿಸಬೇಕು. ಅಂಬೇಡ್ಕರ್ ಅವರ ಪಂಚಧಾಮಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ತಿಳಿಸಿದರು.

ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಉತ್ತರ ಭಾರತದಲ್ಲಿ ದೇವರಂತೆ ಸಂತ ರವಿದಾಸ್‍ಜಿ ಅವರನ್ನು ಆರಾಧಿಸುತ್ತಾರೆ. ಅವರ ಜಯಂತಿ ಆಚರಿಸಿ ಅವರ ಸೇವೆಯನ್ನು ಕೊಂಡಾಡುತ್ತಾರೆ. ರವಿದಾಸರು ದಲಿತ ಸಮಾಜದ ನ್ಯೂನತೆ ಹೋಗಲಾಡಿಸಲು ವಿಶೇಷ ಪ್ರಯತ್ನ ಮಾಡಿದ್ದ ಸಂತರು. ಬಿಜೆಪಿ ದಲಿತರು, ಹಿಂದುಳಿದವರನ್ನು ಒಳಗೊಂಡು ಬೆಳೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರು ಮತ್ತು ಮಾಜಿ ಶಾಸಕ ನಂಜುಂಡಸ್ವಾಮಿ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್, ರಾಜ್ಯ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!