ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಗೆ ಮಧ್ಯಂತರ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಯಿಂದ ಬಂಧನಕ್ಕೊಳಗಾಗಿದ್ದ ಜೆಟ್ ಏರ್‌ವೇಸ್ (Jet Airways) ಸಂಸ್ಥಾಪಕ ನರೇಶ್ ಗೋಯಲ್ (Naresh Goyal) ಅವರಿಗೆ ವೈದ್ಯಕೀಯ ಸೌಲಭ್ಯಕ್ಕಾಗಿ ಬಾಂಬೆ ಹೈಕೋರ್ಟ್ ಸೋಮವಾರ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಿದೆ.

ನ್ಯಾಯಮೂರ್ತಿ ಎನ್.ಜೆ ಜಮಾದಾರ್ ಅವರಿದ್ದ ಏಕ ಸದಸ್ಯ ಪೀಠವು ಗೋಯಲ್ ಅವರಿಗೆ 1 ಲಕ್ಷದ ಶ್ಯೂರಿಟಿಯನ್ನು ಪಾವತಿಸಬೇಕು ಮತ್ತು ವಿಚಾರಣಾ ನ್ಯಾಯಾಲಯದಿಂದ ಪೂರ್ವಾನುಮತಿ ಇಲ್ಲದೆ ಮುಂಬೈ ಬಿಟ್ಟು ಹೋಗಬಾರದು. ಅಲ್ಲದೇ ಪಾಸ್‌ಪಾರ್ಟ್ ಒಪ್ಪಿಸುವಂತೆ ಸೂಚಿಸಿದ್ದು, ಜಾಮೀನು ಮಂಜೂರು ಮಾಡಿದೆ.

ಗೋಯಲ್ (75) ಮತ್ತು ಅವರ ಪತ್ನಿ ಅನಿತಾ ಗೋಯಲ್ ಇಬ್ಬರೂ ಕ್ಯಾನ್ಸರ್ ನಿಂದ ಬಳಲುತ್ತಿರುವ ಕಾರಣ ವೈದ್ಯಕೀಯ ಮತ್ತು ಮಾನವೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿದ್ದರು. ಫೆಬ್ರವರಿಯಲ್ಲಿ ವಿಶೇಷ ನ್ಯಾಯಾಲಯವು ಗೋಯಲ್ ಅವರಿಗೆ ಜಾಮೀನು ನಿರಾಕರಿಸಿತ್ತು.

ಇದಾದ ಬಳಿಕ ಗೋಯಲ್ ಅವರು ಹೈಕೋರ್ಟ್‍ಗೆ ಮನವಿ ಮಾಡಿದ್ದರು.ಈ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸುವಂತೆ ಗೋಯಲ್ ಪರ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಕೆನರಾ ಬ್ಯಾಂಕ್ ಜೆಟ್ ಏರ್‌ವೇಸ್‌ಗೆ ನೀಡಿದ್ದ 538.62 ಕೋಟಿ ರೂ. ಮೊತ್ತದ ಸಾಲವನ್ನು ವಂಚಿಸಿದ್ದಾರೆ ಮತ್ತು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂಬ ಆರೋಪದ ಮೇಲೆ ಗೋಯಲ್ ಅವರನ್ನು ಸೆಪ್ಟೆಂಬರ್ 2023 ರಲ್ಲಿ ಇಡಿ ಬಂಧಿಸಿತ್ತು. 2023ರ ನವೆಂಬರ್‍ನಲ್ಲಿ ಇಡಿ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದಾಗ ಅವರ ಪತ್ನಿಯನ್ನು ಬಂಧಿಸಲಾಗಿತ್ತು. ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಅದೇ ದಿನ ವಿಶೇಷ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!