ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಜನಪ್ರಿಯ ಖಾದ್ಯವಾದ ಝಲ್‌ಮುರಿ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎನ್‌ಡಿಎ ನಾಯಕರ ಸಭೆಯಲ್ಲಿ ಈ ಸಾಂಪ್ರದಾಯಿಕ ತಿಂಡಿ ವಿಶೇಷ ಆಕರ್ಷಣೆಯಾಗಿದ್ದು, ಅದರ ಸುತ್ತ ರಾಜಕೀಯ ವಲಯದಲ್ಲೂ ಹೊಸ ಚರ್ಚೆಗಳು ಆರಂಭವಾಗಿವೆ.
ಎನ್‌ಡಿಎ ಸಭೆಯಲ್ಲಿ ಝಲ್‌ಮುರಿ ವಿಶೇಷ
ಭಾರತ ಮಂಟಪಂನಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಪ್ರಮುಖ ನಾಯಕರು ಭಾಗವಹಿಸಿದ್ದರು. ಈ ವೇಳೆ ಬಂಗಾಳದ ಪ್ರಸಿದ್ಧ ಖಾರ-ಹುಳಿ ರುಚಿಯ ಝಲ್‌ಮುರಿ ಎಲ್ಲರ ಗಮನ ಸೆಳೆಯಿತು. ಕೆಲ ನಾಯಕರು ಸ್ವತಃ ಈ ಖಾದ್ಯವನ್ನು ಸವಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮೋದಿ ಭೇಟಿ ಬಳಿಕ ಹೆಚ್ಚಿದ ಜನಪ್ರಿಯತೆ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಪ್ರವಾಸದ ವೇಳೆ ರಸ್ತೆಬದಿಯ ಅಂಗಡಿಯೊಂದರಲ್ಲಿ ಝಲ್‌ಮುರಿ ಸವಿದ ಘಟನೆ ಸಾಕಷ್ಟು ಸುದ್ದಿಯಾಗಿತ್ತು. ಆ ಬಳಿಕ ಆ ಅಂಗಡಿ ಹಾಗೂ ಈ ಖಾದ್ಯದ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ:
ಅಮಿತ್ ಶಾ ಪೋಸ್ಟ್ ಸುತ್ತ ಚರ್ಚೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಮಿತ್ ಶಾ ತಮ್ಮ ಪೋಸ್ಟ್ ನಲ್ಲಿ “Relished Tangy, Masaledar and Crunchy Jhalmuri at the NDA meeting” (ಎನ್‌ಡಿಎ ಸಭೆಯಲ್ಲಿ ಖಾರ, ಮಸಾಲೆಯುಕ್ತ ಮತ್ತು ಕರಕರೆಯಾದ ಝಲ್‌ಮುರಿಯನ್ನು ಸವಿದು ಆನಂದಿಸಿದೆ) ಎಂದು ಬರೆದುಕೊಂಡಿದ್ದರು. ಅವರು ಬಳಸಿದ ಪದಗಳ ಮೊದಲ ಅಕ್ಷರಗಳ(TMC) ಕುರಿತು ವಿವಿಧ ರೀತಿಯ ವಿಶ್ಲೇಷಣೆಗಳು ನಡೆಯುತ್ತಿದ್ದು, ಅದರಲ್ಲಿ ಪರೋಕ್ಷ ರಾಜಕೀಯ ಸಂದೇಶ ಅಡಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಊಹಾಪೋಹಗಳಿಗೆ ಮತ್ತಷ್ಟು ಬಲ
ಇದೇ ವೇಳೆ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪೋಸ್ಟ್‌ಗೆ ವಿಭಿನ್ನ ಅರ್ಥಗಳನ್ನು ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಆದರೂ, ಝಲ್‌ಮುರಿ ಈಗ ಆಹಾರದ ಜೊತೆಗೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿಯೂ ಪರಿಣಮಿಸಿದೆ.



