ಹೊಸದಿಗಂತ ವರದಿ ಹುಬ್ಬಳ್ಳಿ:
ಮಜೇಥಿಯಾ ಫೌಂಡೇಶನ್ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಅವರ 75 ವಸಂತಗಳ ಸಾರ್ಥಕ ಸಂಭ್ರಮದ ಅಂಗವಾಗಿ ಅ. 1 ರಿಂದ ಅ. 5 ರ ವರೆಗೆ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಸಿಇಒ ಅಜಿತ್ ಕುಲಕರ್ಣಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರ ನಮನ ಎಂಬ ಕಾರ್ಯಕ್ರಮ ಅ. 1 ರಂದು ಸಂಜೆ 5:30 ಕ್ಕೆ ಹಮ್ಮಿಕೊಳ್ಳಾಗಿದ್ದು, 25 ಸೇವೆ ಸಲ್ಲಿಸಿರುವ 25 ವೀರ ಯೋಧರ ಕುಟುಂಬದವರಿಗೆ ಸನ್ಮಾನ ಮಾಡಲಾಗುತ್ತಿದೆ. ವೀರ ನಮನ ಮೆರವಣಿಗೆ ದೇಶಪಾಂಡೆ ನಗರದ ಗಣೇಶ ದೇವಸ್ಥಾನದಿಂದ ಗುಜರಾತ ಭವನವರೆಗೆ ನಡೆಯಲಿದೆ. ಸಮಾರಂಭಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬ್ರಿಗೇಡಿಯರ್ ಎಸ್.ಜಿ. ಭಾಗವಂತ, ಕ್ಯಾಪ್ಟನ್ ನವೀನ ನಾಗಪ್ಪ, ಅಧ್ಯಕ್ಷತೆ ಮಜೇಥಿಯಾ ಫೌಂಡೇಶನ ಚೇರಮನ್ ಜಿತೇಂದ್ರ ಮಜೇಥಿಯಾ ವಹಿಸುವರು.
ಅಂದು ಬೆಳಿಗ್ಗೆ 9:30ಕ್ಕೆ ಮೂರುಸಾವಿರ ಮಠದ ಸಭಾಗೃಹದಲ್ಲಿ 175 ಫಲಾನುಭವಿಗಳಿಗೆ ಉಚಿತ ಕೃತಕ ಕೈ, ಕಾಲು ಜೋಡನಾ ಶಿಬಿರ ನಡೆಯಲಿದ್ದು, ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪಾಲ್ಗೊಳ್ಳುವರು ಎಂದರು.
ಸೆ.2 ರಂದು ಬೆಳಿಗ್ಗೆ 11ಕ್ಕೆ ಮೂರುಸಾವಿರ ಮಠದ ಆವರಣದಲ್ಲಿ ಕೈಗಾಡಿ ತಳ್ಳುವ ಕಾರ್ಮಿಕರಿಗೆ ಉಚಿತ ಕೈಗಾಡಿ ವಿತರಣಾ ಸಮಾರಂಭದಲ್ಲಿ 22 ಕೈಗಾಡಿಗಳನ್ನು ವಿತರಿಸಲಾಗುವುದು. ಕಾರ್ಯಕ್ರಮದ ಅತಿತಯಿಗಳಾಗಿ ಶಾಸಕ ಪ್ರಸಾದ ಅಬ್ಬಯ್ಯ ಪಾಲ್ಗೊಳ್ಳಲಿದ್ದು, ಸಾನ್ನಿಧ್ಯವನ್ನು ಮೂರುಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ವಹಿಸುವರು ಎಂದರು.
ಅ.3 ರಂದು ಬೆಳಿಗ್ಗೆ 10ಕ್ಕೆ ವಿವಿಧ ಪ್ರದೇಶಗಳಲ್ಲಿ ಉಚಿತ ಪೌಷ್ಠಿಕ ಆಹಾರ ಕೊಡುಗೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಸಮಾರಂಭವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು ಎಂದು ಹೇಳಿದರು.
ಅ.4 ರಂದು ಸಂಜೆ 4:40ಕ್ಕೆ ಗಿರಿರಾಜ ಅನೆಲ್ಸ್ ಮಜೇಥಿಯಾ ಫೌಂಡೇಶನ್ ಸಭಾಂಗಣದಲ್ಲಿ ಸೇವಾಹಸ್ತ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳ ದತ್ತು,ಪಿಎಚ್.ಡಿ, ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಹಾಗೂ ಅಂಗವಿಕಲರಿಗೆ ವೀಲ್ ಚೇರ್ ವಿತರಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಮಜೇಥಿಯಾ ಫೌಂಡೇಶನ್ ಅಧ್ಯಕ್ಷೆ ನಂದಿನಿ ಮಜೇಥಿಯಾ ಉಪಸ್ಥಿತರಿರುವರು ಎಂದರು.
ಅ.5 ರಂದು ಬೆಳಿಗ್ಗೆ 10ಕ್ಕೆ ಗಬ್ಬೂರ ವಿಶ್ವಧರ್ಮ ಅಂಗವಿಕಲ ಚೇತನ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಚೇತನೋತ್ಸವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅತಿತಯಿಗಳಾಗಿ ಉದ್ಯಮಿ ವಿಜಯಕುಮಾರ ಶೆಟ್ಟರ್ ಪಾಲ್ಗೊಳ್ಳುವರು ಎಂದು ಹೇಳಿದರು.
ಫೌಂಡೇಶನ್ ಸದಸ್ಯ ಸುಭಾಷಸಿಂಗ್ ಜಮಾದಾರ, ದಿವ್ಯಾಂಗರ ಸಹಾಯಕ ಶಿಬಿರದ ಮುಖ್ಯ ಸಂಚಾಲಕ ಮಂಜುನಾಥ ಭಟ್, ಸುನೀಲ ಕುಮಾರ ಇದ್ದರು.