ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ನಂತರದ ಕಾಲಘಟ್ಟದಲ್ಲಿ ತಲೆದೂರಿರುವ ಆರ್ಥಿಕ ಅನಿಶ್ಚಿತತೆಗಳಿಂದಾಗಿ ಜಾಗತಿಕವಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಭಾರತೀಯ ನವೋದ್ದಿಮೆ ಕ್ಷೇತ್ರವನ್ನೂ ಇದು ಕಾಡಿದ್ದು ಇದೀಗ ಚಿಲ್ಲರೆ ಮಾರಾಟದ ಟೆಕ್ ಕಂಪನಿ ದುಕಾನ್ ತನ್ನ 30 ಶೇಕಡಾ ಉದ್ಯೋಗಿಗಳನ್ನು ಮನೆಗೆ ಕಳಿಸಿದೆ.
ಸುಮಾರು 60 ರಿಂದ 80 ಮಂದಿ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದು ಇದು ಕಂಪನಿಯಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ಎರಡನೇ ಉದ್ಯೋಗ ಕಡಿತವಾಗಿದೆ. ಇತ್ತೀಚಿನ ವಜಾಗೊಳಿಸುವಿಕೆಯು ಮಾರಾಟ ತಂಡ ಮತ್ತು ಅಕೌಂಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ.
ಕಂಪನಿಯು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಮಾರು 23 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕಂಪನಿಯು ತನ್ನ ಗಮನವನ್ನು ಸಣ್ಣ ಕಿರಾಣಾ ಅಂಗಡಿಗಳಿಂದ ನೇರ-ಗ್ರಾಹಕ (D2C) ಬ್ರ್ಯಾಂಡ್‌ಗಳು ಮತ್ತು ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ (SMBs) ಬದಲಾಯಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ ನಡೆಸಿರುವುದಾಗಿ ಕಂಪನಿ ಹೇಳಿಕೊಂಡಿದೆ.