ಮೃತ ನೌಕರನ ಸಹೋದರನಿಗೆ 24 ಗಂಟೆಯಲ್ಲಿ ನೌಕರಿ: ಸಿಬ್ಬಂದಿ ಕುಟುಂಬಕ್ಕೆ ನೆರವಾದ ಬೆಳಗಾವಿ ಡಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್‌, ಬೆಳಗಾವಿ:
ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದರಿಂದ ಅವರ ಅವಲಂಬಿತ ಕಿರಿಯ ಸಹೋದರನಿಗೆ ಕೇವಲ 24 ಗಂಟೆಯಲ್ಲಿ ಅನುಕಂಪ ಆಧಾರಿತ ನೇರ ನೇಮಕಾತಿ ಆದೇಶ ನೀಡುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಳಕಳಿಯನ್ನು ಮೆರೆದಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಚಿನ್ ಮಹಾದೇವ ಬಾದುಲೆ ಅವರು ಆಗಸ್ಟ್ 22 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು. ತಮ್ಮ ಸಹೋದರ ಸೇವೆಯಲ್ಲಿರುವಾಗ ನಿಧನ ಹೊಂದಿರುವುದರಿಂದ ಕುಟುಂಬ ನಿರ್ವಹಣೆಗಾಗಿ ತಮಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಬಸವರಾಜ ಮಹಾದೇವ ಬಾದುಲೆ ಅವರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಮೃತ ಸಚಿನ್ ಬಾದುಲೆ ಅವರ ಅವಲಂಬಿತ ಸಹೋದರ ಮಹಾದೇವ ಅವರನ್ನು ಕೇವಲ 24 ಗಂಟೆಗಳ ಅವಯಲ್ಲಿ ಗ್ರುಪ್ “ಸಿ” ಹುದ್ದೆಗೆ ನೇರ ನೇಮಕಾತಿ ಮಾಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಬಿ.ಎ. ಪದವೀಧರರಾಗಿರುವ ಮಹಾದೇವ ಬಾದುಲೆ ಅವರನ್ನು ಪ್ರಥಮ ದರ್ಜೆ ಸಹಾಯಕರನ್ನಾಗಿ ನೇರ ನೇಮಕ ಮಾಡಿ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯಲ್ಲಿ ಖಾಲಿ ಇರುವ ಪ್ರ.ದ.ಸ. ಹುದ್ದೆಗೆ ನಿಯುಕ್ತಿಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶ ಹೊರಡಿಸಿರುತ್ತಾರೆ.
ಕಚೇರಿಯ ಸಿಬ್ಬಂದಿಯೊಬ್ಬರು ಅಕಾಲಿಕವಾಗಿ ನಿಧನ ಹೊಂದಿರುವುದರಿಂದ ಅವರ ಕುಟುಂಬವು ಸಂಕಷ್ಟಕ್ಕೆ ಸಿಲುಕಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಕೂಡಲೇ ನೇರ ನೇಮಕಾತಿ ಆದೇಶ ನೀಡುವ ಮೂಲಕ ಸಿಬ್ಬಂದಿಯ ಕುಟುಂಬಕ್ಕೆ ನೆರವಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!