ಹೊಸದಿಗಂತ ವರದಿ, ಪೊನ್ನಂಪೇಟೆ:
ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಜನರ ಪಾತ್ರ ಹಿರಿದ್ದಾಗಿದ್ದು,ಉದ್ಯೋಗ ನಿಮಿತ್ತ ಹೊರಗೆ ವಲಸೆ ಹೋಗುತ್ತಿರುವ ಯುವ ಜನರಿಗೆ ಕೊಡಗಿನಲ್ಲಿಯೇ ಅವಕಾಶ ಸೃಷ್ಟಿಸಿ ಬದುಕು ಕಲ್ಪಿಸಿಕೊಡುವ ಅಗತ್ಯತೆ ಇದೆ ಎಂದು ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಪ್ರತಿಪಾದಿಸಿದರು.
ಬಾಡಗರಕೇರಿಯಲ್ಲಿ ಮರೆನಾಡ್ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಮರೆನಾಡ್ ಪುತ್ತರಿ ನಾಡ್ ಕೋಲ್ ಮಂದ್ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂಬಂಧ ಡಿ. 20ರಂದು ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಕೊಡವ ಜನಾಂಗದ ಯುವ ಪೀಳಿಗೆಗೆ ಕೊಡಗಿನಲ್ಲಿಯೇ ಉದ್ಯೋಗ ಕಲ್ಪಿಸುವ ಮತ್ತು ಹೊರಗೆ ನೆಲೆಸಿರುವ ಯುವ ಪೀಳಿಗೆಯನ್ನು ಜಿಲ್ಲೆಯತ್ತ ಆಕರ್ಷಿಸಿಸಲು ಇರುವ ಅವಕಾಶದ ಬಗ್ಗೆ ಕಾರ್ಯಾಗಾರ ನಡೆಸಿ ಚರ್ಚಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.
1942ರಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜದ ಸ್ಥಾಪಕಾಧ್ಯಕ್ಷರೂ ಪರದಂಡ ಕುಟುಂಬದವರಾಗಿದ್ದರು. ಇದೀಗ ಮತ್ತೆ ನಮ್ಮ ಕುಟುಂಬಕ್ಕೆ ಈ ಸ್ಥಾನ ದೊರೆತಿದ್ದು, ಅಖಿಲ ಕೊಡವ ಸಮಾಜದ ಗತವೈಭವವನ್ನು ಮರಳಿಸಲು ಎಲ್ಲರ ಸಹಕಾರ ಪಡೆದು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಮೊದಲ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿರುವ ನನಗೆ ಮರೆನಾಡು ಕೊಡವ ಸಮಾಜದಲ್ಲಿ ಪುತ್ತರಿ ಕೋಲ್ ಮಂದ್ ಸಾಂಸ್ಕೃತಿಕ ವೈಭವದ ಆಚರಣೆ ನೋಡಿ ಹೆಮ್ಮೆಯಾಗಿದೆ. ಕೊಡವ ಸಂಸ್ಕೃತಿ ಪಾಲನೆಯಾಗಬೇಕು. ಜನಾಂಗದವರ ಭೂಮಿ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಆದ್ದರಿಂದ ಕೊಡವರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು ಈ ನಿಟ್ಟಿನಲ್ಲಿಯೂ ಅಖಿಲ ಕೊಡವ ಸಮಾಜ ಚಿಂತನೆ ನಡೆಸಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ ಅವರು, ಗಡಿ ಪ್ರದೇಶದಲ್ಲಿರುವ ಮರೆನಾಡ್ ಕೊಡವ ಸಮಾಜದ ಅಭಿವೃದ್ಧಿಗೆ ಜನಾಂಗದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ನಾಡ್ ತಕ್ಕ ಕುಟುಂಬವಾದ ಕಾಯಪಂಡ, ಚಂಗಣಮಾಡ, ಬೊಳ್ಳೇರ ಕುಟುಂಬದ ತಕ್ಕ ಮುಖ್ಯಸ್ಥರು ಸಾಂಪ್ರದಾಯಿಕ ಮಂದ್ ಪುಡಿಪ ಮೂಲಕ ಮಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಇದಕ್ಕೂ ಮೊದಲ ಮುಖ್ಯದ್ವಾರದಿಂದ ತಕ್ಕ ಮುಖ್ಯಸ್ಥರು ,ಅತಿಥಿಗಳನ್ನು ತಳಿಯತಕ್ಕಿ ಬೊಳಕ್,ಒಡ್ಡೋಲಗದೊಂದಿಗೆ ಮಂದ್’ಗೆ ಕರೆತರಲಾಯಿತು.
ಈ ಸಂದರ್ಭ ಕಳೆದ ಹಲವು ಅವಧಿಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿದ್ದ ಮಲ್ಲೇಂಗಡ ಧನಂಜಯ ಮತ್ತು ಜಂಟಿ ಕಾರ್ಯದರ್ಶಿಯಾಗಿದ್ದ ಗುಡ್ಡಮಾಡ ಚಂಗಪ್ಪ ಅವರ ದೀರ್ಘಕಾಲದ ಸೇವೆ ಪರಿಗಣಿಸಿ ಮತ್ತು ಅಂತರ ಕೊಡವ ಸಮಾಜ ಸ್ಪರ್ಧೆಯಲ್ಲಿ ಕಪ್ಪೆಯಾಟ್ ‘ನಲ್ಲಿ ಪ್ರಥಮ ಸ್ಥಾನ ಪಡೆದ ಕರ್ತಮಾಡ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.
ಮರೆನಾಡ್ ಕೊಡವ ಸಮಾಜ ಗೌರವ ಅಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಗೌರವ ಕಾರ್ಯದರ್ಶಿ ಅಯ್ಯಮಾಡ ಮುತ್ತಣ್ಣ, ಉಪಾಧ್ಯಕ್ಷರುಗಳಾದ ಕರ್ತಮಾಡ ಮಿಲನ್ ಮೇದಪ್ಪ ,ಕುಪ್ಪಣಮಾಡ ಬೇಬಿ ಚೋಂದಮ್ಮ, ಸಲಹೆಗಾರ ಕಾಳಿಮಾಡ ಮುತ್ತಣ್ಣ ,ಸದಸ್ಯರುಗಳಾದ ಕಾಯಪಂಡ ಚಿಣ್ಣಪ್ಪ, ಅಣ್ಣಳಮಾಡ ಲಾಲ ಅಪ್ಪಣ್ಣ, ಕಾಯಪಂಡ ರಾಮು ಪೆಮ್ಮಯ್ಯ ,ಚೋನಿರ ಮಧು ಕಾರ್ಯಪ್ಪ, ಕುಪ್ಪಣಮಾಡ ಪೆಮ್ಮಯ್ಯ, ಕಾಳಿಮಾಡ ಸೋಮಣ್ಣ, ಮೀದೇರಿರ ಕವಿತಾ, ಬೊಟ್ಟಂಗಡ ರವೀಂದ್ರ, ಮೀದೇರಿರ ರಾಜ, ಮೂಕಳಮಾಡ ವೀಟು, ಅಣ್ಣಳಮಾಡ ಗಿರೀಶ್, ಬಿರುನಾಣಿ ಗ್ರಾ.ಪಂ.ಅಧ್ಯಕ್ಷೆ ಮಲ್ಲೇಂಗಡ ರೀನಾ ಮತ್ತಿತರರು ಹಾಜರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ