ತಂದೆಯಂತೆ ಮಗ… ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಅರ್ಜುನ್ ತೆಂಡೂಲ್ಕರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗಾಡ್‌ ಆಫ್ ಕ್ರಿಕೆಟ್‌ ಸಚಿನ್ ತೆಂಡೂಲ್ಕರ್ ತಾವು ರಣಜಿಗೆ ಪಾದಾರ್ಪಣೆ ಮಾಡಿದ್ದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ಅದಾಗಿ ಸುಮಾರು 35 ವರ್ಷಗಳ ನಂತರ, ಅವರ ಮಗ ಅರ್ಜುನ್ ತೆಂಡೂಲ್ಕರ್ ಬುಧವಾರ ಇದೇ ರೀತಿಯ ಸಾಧನೆಯನ್ನು ಪುನರಾವರ್ತಿಸುವ ಮೂಲಕ ಅಪ್ಪನ ಹಾದಿಯಲ್ಲೇ ಸಾಗುವ ನಿರೀಕ್ಷೆ ಮೂಡಿಸಿದ್ದಾರೆ.
ಈ ಋತುವಿನಲ್ಲಿ ಮುಂಬೈ ತಂಡ ತೊರೆದು ಗೋವಾ ಪರ ಆಡುತ್ತಿರುವ  ಜೂನಿಯರ್ ಸಚಿನ್‌ ಅರ್ಜುನ್, ಪೊರ್ವೊರಿಮ್‌ನ ಗೋವಾ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ರಾಜಸ್ಥಾನ ವಿರುದ್ಧ ನಡೆದ ಪಂದ್ಯದಲ್ಲಿ 177 ಎಸೆತಗಳಲ್ಲಿ ತಮ್ಮ ಚೊಚ್ಚಲ ಪ್ರಥಮ ದರ್ಜೆ ಶತಕವನ್ನು ಸಿಡಿಸಿದರು.
7ನೇ ಕ್ರಮಾಂಕದಲ್ಲಿ ಅರ್ಜುನ್ ಬ್ಯಾಟಿಂಗ್‌ ಗೆ ಇಳಿಯುವಾಗ ಗೋವಾ ತಂಡ 201/5 ವಿಕೆಟ್‌ ಕಳೆದುಕೊಂಡಿತ್ತು. 12 ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್‌ಗಳಿರುವ 112 ರನ್‌ ಸಿಡಿಸಿರುವ ಅರ್ಜುನ್‌ ಗೋವಾವನ್ನು ಬೃಹತ್‌ ಮೊತ್ತದತ್ತ ಕೊಂಡೊಯ್ಯುತ್ತಿದ್ದಾರೆ. ಆರ್ಸಿಬಿ ಆಟಗಾರ ಸುಯಶ್ ಪ್ರಭುದೇಸಾಯಿ (172 ಬ್ಯಾಟಿಂಗ್) ಅವರೊಂದಿಗೆ ಮುರಿಯದ 205 ರನ್‌ಗಳ ಜೊತೆಯಾಟವನ್ನು ಆಡುವುದರೊಂದಿಗೆ ಗೋವಾ 410 ರನ್‌ ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಈ ಋತು ಪ್ರಾರಂಭಕ್ಕೂ ಮೊದಲು ಅರ್ಜುನ್ ತೆಂಡೂಲ್ಕರ್ ಗೋವಾಗೆ ತೆರಳಲು ನಿರ್ಧರಿಸಿದ್ದರು ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆಯಿಂದ (ಎಂಸಿಎ) ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಕೋರಿದ್ದರು.
ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಸಚಿನ್ ತನ್ನ ಮಗನನ್ನು ಭೇಟಿಯಾಗಲು ಗೋವಾಕ್ಕೆ ತೆರಳಿದ್ದರು. ಅರ್ಜುನ್ ಈ ಋತುವಿನಲ್ಲಿ ಗೋವಾ ಪರ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಆಡಿದ್ದರು. ಎಡಗೈ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ವೇಗಿ ಎಂಟು ಲಿಸ್ಟ್ ಎ ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗೋವಾ ಪರ ಮೂರು T20 ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!