ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಫ್ರಿಕಾದ ಝಾಂಬಿಯಾದ ರಾಜಧಾನಿ ಲೂಸಕದಲ್ಲಿ ಭಾನುವಾರ 68ನೇ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಯಿತು.
ನಾಡಗೀತೆ ಹಾಗೂ ಶಿಲ್ಪಾ ಜಯಾನಂದ ಪಾಣೆಮಂಗಳೂರು ತಂಡದವರಿಂದ ದೀಪ ಬೆಳಗಿಸುವ ಮೂಲಕ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಝಾಂಬಿಯಾ ಕನ್ನಡ ಸಂಘದ ನೂತನ ಸದಸ್ಯರ ಸದಸ್ಯತ್ವದ ನೋಂದಾವಣಿ ಹಾಗೂ ಕನ್ನಡ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕನ್ನಡ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಜ್ ಕುಮಾರ್ ಕಲ್ಯಾಣ್ ಶೆಟ್ಟಿ ಮಾತನಾಡಿ, ಕನ್ನಡ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಸಂಘದ ಅಭಿವೃದ್ಧಿಗಾಗಿ ಮತ್ತಷ್ಟು ಕಾರ್ಯ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಚಿಂತನೆಯಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರನ್ನು ಒಟ್ಟು ಸೇರಿಸಿ ಹೆಚ್ಚು ಹೆಚ್ಚು ಸಾಂಸ್ಕೃತಿಕ ಚಟುವಟಿಕೆ ಹಾಗೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಸಂಘದ ಸಕ್ರಿಯ ಸದಸ್ಯರ ಸಂಖ್ಯೆೆ ಹೆಚ್ಚಿಸುವ ಕಡೆ ಗಮನಹರಿಸಲಾಗುವುದು. ಸಂಘಕ್ಕೆೆ ಎಲ್ಲರ ಸಹಕಾರ ಇದೇ ರೀತಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಬಿಂಬಿಸುವ ಹಾಡು, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ನಾಡಿಗೆ ಸೇವೆ ಸಲ್ಲಿಸಿದ ಮಹಾ ಪುರುಷರನ್ನು ಸ್ಮರಿಸಲಾಯಿತು. ಬಳಿಕ ಝಾಂಬಿಯಾ ಕನ್ನಡ ಸಂಘದ ಈ ಹಿಂದಿನ ರಾಜ್ಯೋತ್ಸವದ ಹಾಗೂ ಸಂಘದ ವರದಿಯನ್ನು ರಘುನಾಥ್ ಮಂಡಿಸಿದರು.
ಕಾರ್ಯಕ್ರಮ ಭಾರತಿ ಬಸವರಾಜ್ ನಿರೂಪಿಸಿದರು.ಝಾಂಬಿಯಾದಲ್ಲಿ ನೆಲೆಸಿರುವ ಸುಮಾರು 125 ಮಂದಿ ಕನ್ನಡಿಗರು ಇದ್ದರು.
ಪದಾಧಿಕಾರಿಗಳು
ಅಧ್ಯಕ್ಷ – ರಾಜ್‌ಕುಮಾರ್ ಕಲ್ಯಾಣಶೆಟ್ಟಿ, ಧಾರವಾಡ
ಉಪಾಧ್ಯಕ್ಷ – ಧನಂಜಯ ನಾಗೇಶ್, ಬೆಂಗಳೂರು
ಕಾರ್ಯದರ್ಶಿ- ಮಂಜುನಾಥ ಸಂಕನೂರು, ಕೊಪ್ಪಳ
ಖಜಾಂಜಿ -ಪ್ರಮೋದ್ ಪೂಜಾರಿ, ಮಂಗಳೂರು
ಸಾಂಸ್ಕೃತಿಕ ಕಾರ್ಯದರ್ಶಿ- ನಾಗ ದೀಪಿಕಾ, ಬೆಂಗಳೂರು
ಸಮಿತಿ ಸದಸ್ಯರು: ವಂದಿತ ಅಖಿಲೇಶ್ ಬೆಂಗಳೂರು, ನವೀನಾ ದಿವಾಕರ್ ಬೆಂಗಳೂರು, ಶ್ರೀನಿವಾಸ್ ಉಪ್ಪಾರ್, ಹಾವೇರಿ, ರವೀಂದ್ರ ಕುಂದರ್ ಸಾಸ್ತಾನ, ಚಿತ್ತರಂಜನ್ ದಾಸ್ ಮುಲ್ಕಿ-ಬಪ್ಪನಾಡು, ಭರತ್ ಬಡ್ಕುಂಡ್ರಿ ಬೆಳಗಾವಿ, ಬಸವರಾಜ್ ಗುಲ್ಲಪ್ಪಗೋಲ್ ಬೆಳಗಾವಿ, ಉಷಾ ಎನ್. ಬೆಂಗಳೂರು, ಅವರನ್ನು ಆಯ್ಕೆ ಮಾಡಲಾಯಿತು.