ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ 11 ನೇ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಿ: ಬೋಪಯ್ಯ ಮನವಿ

ಹೊಸದಿಗಂತ ವರದಿ ಮಡಿಕೇರಿ:

ಮಡಿಕೇರಿ ತಾಲೂಕಿನ 11 ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಟ್ಟಗೇರಿಯ ಉದಯ ಪ್ರೌಢಶಾಲೆ ಆವರಣದಲ್ಲಿ ಜ.28ರಂದು ನಡೆಸಲು ನಿರ್ಧರಿಸಲಾಗಿದ್ದು, ಆ ನಿಟ್ಟಿನಲ್ಲಿ ನುಡಿ ಜಾತ್ರೆಗೆ ಎಲ್ಲರೂ ಕೈಜೋಡಿಸುವಂತೆ ಶಾಸಕ ಹಾಗೂ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಜಿ.ಬೋಪಯ್ಯ ಮನವಿ ಮಾಡಿದರು.

ಬೆಟ್ಟಗೇರಿಯ ಉದಯ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಮಡಿಕೇರಿ ತಾಲೂಕು 11 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸಮ್ಮೇಳನ ಯಶಸ್ಸಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.

‘ಅಂತ್ಯತ ಕಡಿಮೆ ಖರ್ಚಿನಲ್ಲಿ ಅಕ್ಷರ ಜಾತ್ರೆಯನ್ನು ಯಶಸ್ಸುಗೊಳಿಸಲು ಎಲ್ಲರೂ ಶ್ರಮಿಸಬೇಕು. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಎಲ್ಲಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹೀಗೆ ಎಲ್ಲರೂ ನಾಡು ನುಡಿಗೆ ಕೈಜೋಡಿಸಬೇಕೆಂದು ಶಾಸಕರು ಕೋರಿದರು.’ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿರಿಸಿ ಕುಟುಂಬದಂತೆ ಎಲ್ಲರೂ ಕಾರ್ಯಕ್ರಮ ಯಶಸ್ಸಿಗೆ ಮುಂದಾಗಬೇಕು. ಬೆಟ್ಟಗೇರಿ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಕನ್ನಡ ನಾಡು ನುಡಿಗೆ ಶ್ರಮಿಸಿ, ಒಳ್ಳೆಯ ಸಂದೇಶ ನೀಡುವಂತಾಗಬೇಕು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕನಿಷ್ಟ 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಬೇಕು ಎಂದು ಕೆ.ಜಿ.ಬೋಪಯ್ಯ ಸಲಹೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ, ವೇದಿಕೆ, ಸಾಂಸ್ಕೃತಿಕ, ಆಹಾರ, ಮೆರವಣಿಗೆ, ಅಲಂಕಾರ, ಹೀಗೆ ವಿವಿಧ ಉಪ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸುವಂತೆ ಕೋರಿದರು.

ಸಭಾಂಗಣದಲ್ಲಿ ಸುಮಾರು 2500 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಬೇಕು. ವೇದಿಕೆ ನಿರ್ಮಾಣ ಸಂಬಂಧಿಸಿದಂತೆ ವಿನ್ಯಾಸವನ್ನು ಸರಿಯಾಗಿ ಮಾಡಬೇಕು. ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿಡಿಒಗಳು, ಅಧಿಕಾರಿಗಳು ಮತ್ತು ಅಧಿಕಾರೇತರರು, ಸಹಕಾರ ಸಂಘಗಳ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಕನ್ನಡ ನಾಡುನುಡಿ ಒಳಗೊಂಡ ಸ್ತಬ್ಧ ಚಿತ್ರ ನಿರ್ಮಾಣ ಮಾಡಬೇಕು. ಈ ಸಂಬಂಧ ರಸ್ತೆ ಉದ್ದಕ್ಕೂ ತೋರಣ ಕಟ್ಟುವುದು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸುವುದು ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಉಪ ಸಮಿತಿಗಳಿಗೆ ಸಲಹೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಅವರು ಮಾತನಾಡಿ, ಬೆಟ್ಟಗೇರಿ ಸುತ್ತಮುತ್ತ ಎಲ್ಲಾ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸೇರಿದಂತೆ ಎಲ್ಲರೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು ಕೋರಿದರು.

ಬೆಟ್ಟಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರನ್ನು ಗೌರವಿಸುವುದು, ಸ್ಥಳೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವುದು, ಸ್ಮರಣ ಸಂಚಿಕೆ ಹೊರತರುವುದು, ಸ್ವಾಗತ, ವೇದಿಕೆ, ಮೆರವಣಿಗೆ, ಆಹಾರ, ಕವಿಗೋಷ್ಠಿ, ವಿಚಾರಗೋಷ್ಠಿಗೆ ಅಧ್ಯಕ್ಷರನ್ನು ನೇಮಿಸಲಾಗಿದ್ದು, ಎಲ್ಲವನ್ನು ಜವಾಬ್ದಾರಿಯನ್ನು ಹಂಚಿಕೊಂಡು ಸಮ್ಮೇಳನ ಯಶಸ್ಸಿಗೆ ಶ್ರಮಿಸಬೇಕು.  ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಅವರು ಲೇಖನಗಳನ್ನು ಆಹ್ವಾನಿಸಿ ಸಾಂಕೇತಿಕವಾಗಿ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಈ ಸಂಬಂಧ ಎಲ್ಲಾ ರೀತಿಯ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!