ಹೊಸದಿಗಂತ ವರದಿ ಮೈಸೂರು:
ನಾಡ ಹಬ್ಬ ಮೈಸೂರು ದಸರಾ 2023 ರಲ್ಲಿ ವಿವಿಧ ಕಂಪನಿಗಳು, ಉದ್ಯಮಿಗಳು ಪ್ರಾಯೋಜಕತ್ವ ವಹಿಸಿ ಸ್ಪಾನ್ಸರ್ ನೀಡಲು ಅವಕಾಶವಿದ್ದು, ನಮ್ಮೊಂದಿಗೆ ಕೈಜೋಡಿಸಿ ದಸರಾ ಆಚರಣೆ ಯಶಸ್ವಿಗೊಳಿಸುವುದರೊಂದಿಗೆ ತಮ್ಮ ವ್ಯಾಪಾರ ವಹಿವಾಟು ಅಭಿವೃದ್ಧಿ ಗೊಳಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ತಿಳಿಸಿದರು.
ನಗರದ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ದಸರಾ ಪ್ರಾಯೋಜಕತ್ವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಸರಳವೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದೆ. ವಿವಿಧ ರೀತಿಯ ಪ್ರಾಯೋಜಕತ್ವಗಳು ಇದ್ದು, ಟೈಟಲ್ ಸ್ಪಾನ್ಸರ್ 3 ಕೋಟಿ, ಪ್ಲಾಟಿನಂ ಸ್ಪಾನ್ಸರ್ 1 ಕೋಟಿ, ಗೋಲ್ಡ್ ಸ್ಪಾನ್ಸರ್ 50 ಲಕ್ಷ , ಸಿಲ್ವರ್ ಸ್ಪಾನ್ಸರ್ 25 ಲಕ್ಷ, ಅಸೋಸಿಯೇಟ್ ಮತ್ತು ಇವೆಂಟ್ ಸ್ಪಾನ್ಸರ್ 3 ಲಕ್ಷ ಇರುತ್ತದೆ. ಸ್ಪಾನ್ಸರ್ ಮಾಡುವವರಿಗೆ ದಸರಾ ಕಾರ್ಯಕ್ರಮಗಳಲ್ಲಿ ತಮ್ಮ ಕಂಪನಿಯ ಜಾಹೀರಾತುಗಳನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ತಾವು ಪೂರ್ಣ ಒಂದು ಈವೆಂಟ್ ಅಥವಾ ಒಂದು ದಿನ,ಒಂದು ಕಾರ್ಯಕ್ರಮ ಯಾವ ರೀತಿಯಾದರೂ ಪ್ರಾಯೋಜಕತ್ವ ನೀಡಬಹುದಾಗಿದೆ, ದಸರಾ ಹೋರ್ಡಿಂಗ್ಸ್,ಬ್ಯಾನರ್ಸ್ ಮತ್ತು ಕಾರ್ಯಕ್ರಮ ನಿರೂಪಕರಿಂದ ನಿಮ್ಮ ಉತ್ಪನ್ನಗಳ ಹೆಸರುಗಳನ್ನು ಹೇಳಿಸುವ ಮೂಲಕ ಬ್ರಾಂಡ್ ಮಾಡಬಹುದಾಗಿದೆ ಇದರಿಂದ ನೀವು ಬೆಳೆಯುವುದರೊಂದಿಗೆ ನಿಮ್ಮ ಉದ್ಯಮಗಳ ಬೆಳವಣಿಗೆ ಆಗಲಿದೆ ಎಂದರು.
ದಸರಾ ಆಚರಣೆಗೆ ವಿವಿಧ ಸಮಿತಿಗಳನ್ನು ಮಾಡಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ಪಾನ್ಸರ್ ಶಿಪ್ ನೀಡುವವರು ನಾಳೆ ಬೆಳಿಗ್ಗೆ 12 ಗಂಟೆಯೊಳಗೆ ಮಾಹಿತಿ ನೀಡಬೇಕು. ರೈತ ದಸರಾಗೆ ರಸಗೊಬ್ಬರ ಕಂಪನಿಗಳು, ಟ್ರಾಕ್ಟರ್ ಹಾಗೂ ಕೃಷಿ ಉಪಕರಣಗಳ ಕಂಪನಿ ಅವರು ಪ್ರಾಯೋಜಕತ್ವ ವಹಿಸಿಕೊಳ್ಳಬಹುದಾಗಿದೆ. ಇದೇ ರೀತಿ ಉಳಿದ ಉದ್ಯಮಿಗಳು ತಮಗೆ ಅನುಕೂಲವಾಗುವ ಕಾರ್ಯಕ್ರಮ ಗಳಿಗೆ ಪ್ರಾಯೋಜಕತ್ವ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮೂಡಾ ಆಯುಕ್ತರಾದ ದಿನೇಶ್, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ರೂಪಶ್ರೀ, ಆಹಾರ ಇಲಾಖೆಯ ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಸೇರಿದಂತೆ ವಿವಿಧ ಕಂಪನಿಗಳು,ಬ್ಯಾಂಕಿಂಗ್, ಹೋಟೆಲ್ ಉದ್ಯಮಿಗಳು ಉಪಸ್ತಿತರಿದ್ದರು.