Wednesday, December 7, 2022

Latest Posts

ನ್ಯಾಯಾಂಗದ ಮೇಲಿದೆ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ: ನ್ಯಾ. ಎ.ಎಸ್. ಬೋಪಣ್ಣ

ಹೊಸದಿಗಂತ ವರದಿ, ಮಡಿಕೇರಿ:

ಶಾಸಕಾಂಗ, ಕಾರ್ಯಾಂಗಕ್ಕಿಂತಲೂ ಜನತೆ ನ್ಯಾಯಾಂಗದ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನ್ಯಾಯಾಂಗದ ಮೇಲಿದೆ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅಭಿಪ್ರಾಯಿಸಿದರು.

ಮಡಿಕೇರಿ ನಗರದಂಚಿನಲ್ಲಿ 39.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯ ಸಂಕೀರ್ಣ ಮತ್ತು ಎಡಿಆರ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಗೆ ಅಗತ್ಯವಿರುವ ಸೌಲಭ್ಯಗಳನ್ನು, ಉತ್ತಮ ಸವಲತ್ತುಗಳನ್ನು ಒದಗಿಸಲು ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ನೆರವಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಅನುದಾನವನ್ನು ಒದಗಿಸಿ ಸಹಕರಿಸಿದ್ದಾರೆ. ಲಭ್ಯ ಸೌಲಭ್ಯಗಳನ್ನು ಬಳಿಸಿಕೊಂಡು ನ್ಯಾಯದಾನ ಮಾಡಬೇಕೆಂದು ಸಲಹೆ ಮಾಡಿದರು.

ನೂತನ ಮತ್ತು ಎಲ್ಲಾ ಸವಲತ್ತು ಹೊಂದಿದ ಹೊಸ ನ್ಯಾಯಾಲಯಗಳ ಉದ್ಘಾಟಿಸುವುದು ಎಂದರೆ ಪ್ರಕರಣಗಳ ಸಂಖ್ಯೆ ಹೆಚ್ಚಲಿ ಎನ್ನುವ ಅನಿಸಿಕೆಯೇ ಎಂದು ಹಾಸ್ಯದ ದಾಟಿಯಲ್ಲಿ ನುಡಿದ ಬೋಪಣ್ಣ ಅವರು, ನೂತನ ಕಟ್ಟಡ ಮತ್ತು ಅಗತ್ಯ ಸೌಲಭ್ಯಗಳನ್ನು ನ್ಯಾಯಾಂಗ ವ್ಯವಸ್ಥೆ ಪಡೆಯುವ ಮೂಲಕ, ನ್ಯಾಯದಾನ ಪ್ರಕ್ರಿಯೆಯನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗುತ್ತದೆ. ಜನರು ಇಂದಿಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸವನ್ನಿರಿಸಿಕೊಂಡಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಪ್ರಸ್ತುತ ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಅವರ ಭರವಸೆಗಳನ್ನು, ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನ್ಯಾಯಾಂಗದ ಮೇಲಿದೆಯೆಂದು ದೃಢವಾಗಿ ನುಡಿದರು.

ನ್ಯಾಯಾಂಗ ಕ್ಷೇತ್ರದಲ್ಲೂ ಸಾಧನೆ
ಕೊಡಗು ಜಿಲ್ಲೆ ಯೋಧರ ನಾಡು, ಇಬ್ಬರು ಜನರಲ್‍ಗಳನ್ನು ದೇಶಕ್ಕೆ ನೀಡಿದ ಹೆಮ್ಮೆಯ ನಾಡು. ಸೇನಾ ಕ್ಷೇತ್ರಕ್ಕೆ ಕೊಡಗು ದೊಡ್ಡ ಕೊಡುಗೆಯನ್ನು ನೀಡಿರುವಂತೆಯೇ ನ್ಯಾಯಾಂಗ ಕ್ಷೇತ್ರಕ್ಕೂ ಸಾಕಷ್ಟು ಮಂದಿಯನ್ನು ನೀಡಿದ್ದು, ಸರ್ವೋಚ್ಛ ನ್ಯಾಯಾಲಯ, ರಾಜ್ಯ ಉಚ್ಛ ನ್ಯಾಯಾಲಯಗಳಲ್ಲೂ ಜಿಲ್ಲೆಯವರು ತಮ್ಮ ಸೇವೆಯನ್ನು ನೀಡುತ್ತಿದ್ದಾರೆಂದು ಹೆಮ್ಮೆಯಿಂದ ನುಡಿದರು.

ಕಕ್ಷಿದಾರರ ಕಣ್ಣೀರು ಒರೆಸುವ ಕಾರ್ಯವಾಗಲಿ
ಸಭಾಧ್ಯಕ್ಷತೆ ವಹಿಸಿದ್ದ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮಾತನಾಡಿ, ಒಂದಿಲ್ಲ ಒಂದು ಸಮಸ್ಯೆ ಮತ್ತು ಸಂಕಷ್ಟಗಳನ್ನು ಹೊತ್ತು ನ್ಯಾಯಾಲಯದ ಮೆಟ್ಟಿಲೇರುವ ಕಕ್ಷಿದಾರರ ಕಣ್ಣೀರು ಒರೆಸುವ ಕಾರ್ಯ ನ್ಯಾಯಾಲಯಗಳ ಮೂಲಕ ನಡೆಯಬೇಕಾಗಿರುವುದು ಅತ್ಯಂತ ಅವಶ್ಯವಾದುದೆಂದರು.

ಪ್ರಸ್ತುತ ನೂತನ ನ್ಯಾಯಾಲಯ ಸಂಕೀರ್ಣದೊಂದಿಗೆ ಪ್ರಕರಣಗಳ ಸೌಹಾರ್ದ ಇತ್ಯರ್ಥಕ್ಕೆ ಎಡಿಆರ್ ಕೇಂದ್ರವನ್ನು ತೆರೆಯಲಾಗಿದೆ. ಪ್ರಸ್ತುತ ಇರುವ ಈ ಎಲ್ಲಾ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕೆಂದು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ತಿಳಿಸಿದರು.
ನ್ಯಾಯಾಲಯ ಎನ್ನುವುದು ನ್ಯಾಯಾಂಗದ ದೇವಾಲಯವೇ ಆಗಿದ್ದು. ಈ ನ್ಯಾಯ ದೇಗುಲದ ರಥವನ್ನು ನ್ಯಾಯಾಂಗ ಇಲಾಖೆ, ವಕೀಲ ಸಮೂಹದೊಂದಿಗೆ ಪ್ರತಿಯೊಬ್ಬರು ಎಳೆಯುವಂತೆ ಕರೆ ನೀಡಿದರು.

ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಪೂಣಚ್ಚ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ನೂತನ ನ್ಯಾಯಾಲಯ ಸಂಕೀರ್ಣದ ಸೌಲಭ್ಯಗಳನ್ನು ಬಳಸಿಕೊಂಡು ನ್ಯಾಯದಾನ ಶೀಘ್ರವಾಗಿ ನಡೆಯುವಂತಾಗಲೆಂದು ಆಶಿಸಿದರು.

ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಎಂ.ಜಿ. ಶುಕುರೆ ಕಮಲ್ ಮಾತನಾಡಿ, ನ್ಯಾಯದಾನ ಮಾಡುವುದಕ್ಕೆ ಪೂರಕವಾದ ಉತ್ತಮವಾದ ಕಟ್ಟಡವಿಂದು ಉದ್ಘಾಟನೆಯಾಗಿದೆ. ಪ್ರತಿಯೊಬ್ಬರಲ್ಲಿ ಶಾಂತಿ, ಸಮಾಧಾನಗಳು ಇಲ್ಲದಿದ್ದಲ್ಲಿ ಕಟ್ಟಡಗಳಾಗಲಿ, ಅದರ ಸೌಲಭ್ಯಗಳಾಗಲಿ ಪ್ರಯೋಜನಕ್ಕೆ ಬರಲಾರದೆಂದು ಮಾರ್ಮಿಕವಾಗಿ ನುಡಿದರು. ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಇ.ಎಸ್. ಇಂದಿರೇಶ್ ಮಾತನಾಡಿದರು.

ಗೌರವಾರ್ಪಣೆ
ಭಾರತದ ಸರ್ವೋಚ್ಛ ನ್ಯಾಯಾಲಯ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ, ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಮತ್ತು ಕೊಡಗಿನ ಆಡಳಿತಾತ್ಮಕ ನ್ಯಾಯಾಧೀಶ ಈ.ಎಸ್.ಇಂದಿರೇಶ್, ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಜಿ.ಶುಕುರೆ ಕಮಲ್, ಸಿ.ಎಂ.ಪೂಣಚ್ಚ ಅವರನ್ನು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಗೌವಿಸಿದರು.
ಇದೇ ಸಂದರ್ಭ ಮಡಿಕೇರಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಟಿ. ಜೋಸೆಫ್, ಕೆ.ಎಸ್. ಕವನ್, ಮಾಜಿ ಕಾರ್ಯದರ್ಶಿಗಳಾದ ಭೀಮಯ್ಯ, ಪಿ.ಯು. ಪ್ರೀತಂ, ಪಿ.ಜಿ. ಕಿಶೋರ್ , ನ್ಯಾಯಾಲಯ ಸಂಕೀರ್ಣ ನಿರ್ಮಿಸಿದ ಸಂಸ್ಥೆಯ ಕರ್ನಲ್ ಬೋಪಣ್ಣ, ಪಿಡಬ್ಲ್ಯುಡಿ ಇಂಜಿನಿಯರ್ ನಾಗರಾಜ್ ಅವರನ್ನು ಗೌರವಿಸಲಾಯಿತು.

ಶಾಸಕ ಕೆ.ಜಿ. ಬೋಪಯ್ಯ  , ಶಾಸಕ ಅಪ್ಪಚ್ಚು ರಂಜನ್ , ರಾಜ್ಯ ಉಚ್ಛ ನ್ಯಾಯಾಲಯದ ವಿಜಿಲೆನ್ಸ್ ವಿಭಾಗದ ರಿಜಿಸ್ಟ್ರಾರ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾ ನ್ಯಾಯಾಧೀಶ ಎಂ. ಭೃಂಗೇಶ್, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ, ಉಪಾಧ್ಯಕ್ಷ ಕೆ.ಎಸ್. ತಮ್ಮಯ್ಯ, ಕಾರ್ಯದರ್ಶಿ ಅರುಣ್ ಕುಮಾರ್,ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!