ಶಾಸಕಾಂಗದ ಅಧಿಕಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪ- ಉಪರಾಷ್ಟ್ರಪತಿ ಧನ್ಕರ್, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಹೇಳಿದ್ದಿಷ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚಿನ ದಿನಗಳಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ತಿಕ್ಕಾಟಗಳು ಮತ್ತೊಮ್ಮೆ ಸದ್ದು ಮಾಡುತ್ತಿವೆ. ಶಾಸಕಾಂಗದ ಕಾರ್ಯಚಟುವಟಿಕೆಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪದ ಕುರಿತು ಸಂಸತ್ತಿನ ಮುಖ್ಯಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂಸತ್ತು ಅಂಗೀಕರಿಸಿದ್ದ ನ್ಯಾಯಾಂಗ ನೇಮಕಾತಿ ಪ್ರಾಧಿಕಾರ (NJAC) ಸಂವಿಧಾನ ತಿದ್ದುಪಡಿಯನ್ನು ನ್ಯಾಯಾಲಯವು ನಿರರ್ಥಕವೆಂದು ಹೇಳಿರುವುದು ಈ ಚರ್ಚೆಯ ಮೂಲ. ನಿನ್ನೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ಉಪರಾಷ್ಟ್ರಪತಿ ಹಾಗು ರಾಜ್ಯ ಸಭೆಯ ಸಭಾಪತಿಗಳಾದ ಜಗದೀಪ್‌ ಧನ್ಕರ್, ಮತ್ತು ಕೆಳಮನೆ ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ನ್ಯಾಯಾಂಗದ ಈ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ. ಹೇಗೆ ನ್ಯಾಯಾಂಗದ ನಿರ್ಣಯಗಳನ್ನು ಸಂಸತ್ತು ಮೀರುವುದಿಲ್ಲವೋ ಹಾಗೆಯೇ ನ್ಯಾಯಾಧೀಶರೂ ಕೂಡ ಕಾನೂನು ನಿರ್ಮಿಸುವ ಅಧಿಕಾರವನ್ನು ದಾಟುವಂತಿಲ್ಲ ಎಂದಿದ್ದಾರೆ.

ಈ ಕುರಿತು ಜಗದೀಪ್‌‌ ಧನ್ಕರ್ ಹೇಳಿರುವ ಅಂಶಗಳ ಸಂಕ್ಷೇಪರೂಪ ಹೀಗಿದೆ. “1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ʼಮೂಲ ಸ್ವರೂಪʼವನ್ನು ಉಲ್ಲೇಖಿಸುವ ಮೂಲಕ ಸಂಸತ್ತಿನ ಕಾನೂನು ರಚನೆಯ ಅಧಿಕಾರವನ್ನು ಮಿತಿಗೊಳಿಸಿ, ನ್ಯಾಯಾಂಗದ ಪಾರಮ್ಯ ಸ್ಥಾಪಿಸುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಮೂಲ ಸ್ವರೂಪದ ಮೂಲವೇ ಜನರ ಅಭಿಪ್ರಾಯ. ಇದನ್ನು ಮೀರಲಾಗದು. ಸಂಸತ್ತು ಪ್ರಜಾಪ್ರಭುತ್ವದ ಜೀವಸೆಲೆಯಿದ್ದಂತೆ. ಸಂಸದೀಯ ಸಾರ್ವಭೌಮತ್ವ ಮತ್ತು ಸ್ವಾಯತ್ತತೆಯನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಈ ಎರಡೂ ವಿಷಯಗಳು ಅತಿ ಅಗತ್ಯವಾದುದು. ಜನರ ಆದೇಶವನ್ನು ತಟಸ್ಥಗೊಳಿಸಲು ಯಾವುದೇ ಸಂಸ್ಥೆಯು ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ. ಜನರ ಸಾರ್ವಭೌಮತ್ವವನ್ನು ರಕ್ಷಿಸುವುದು ಸಂಸತ್ತು ಮತ್ತು ಶಾಸಕಾಂಗಗಳ ಬಾಧ್ಯತೆ. ಪ್ರಸ್ತುತ ಸುಪ್ರಿಂ ಕೋರ್ಟ್‌ ನಿರಾಕರಿಸಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ತಿದ್ದುಪಡಿ ಕಾಯ್ದೆಯು ಸಂಸತ್ತಿನಲ್ಲಿ ಪೂರ್ಣ ಬಹುಮತದಿಂದ ಅಂಗೀಕಾರಗೊಂಡು, ರಾಷ್ಟ್ರಪತಿಗಳ ಅಂಕಿತ ಪಡೆದಿದೆ. ಇದನ್ನು ನ್ಯಾಯಾಂಗವು ರದ್ದುಗೊಳಿಸಿತು. ಇಂತಹ ಸನ್ನಿವೇಶವು ಬಹುಶಃ ಪ್ರಪಂಚದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇನ್ನೂ ನಡೆದಿಲ್ಲ” ಎನ್ನುವ ಮೂಲಕ ನ್ಯಾಯಾಂಗದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಈ ಕುರಿತು ಹೇಳಿದ್ದೇನೆಂದರೆ “ನ್ಯಾಯಾಂಗವು ಶಾಸಕಾಂಗ ಸಂಸ್ಥೆಗಳ ಪಾವಿತ್ರ್ಯತೆಯನ್ನು ಗೌರವಿಸಬೇಕು. ಸಾಂವಿಧಾನಿಕ ಪ್ರಜಾಪ್ರಭುತ್ವದ ಅಂಗಗಳು ತಮ್ಮ ನಿರ್ದಿಷ್ಟ ಪಾತ್ರಗಳಿಗೆ ಬದ್ಧವಾಗಿರಬೇಕು. ಸಾಂವಿಧಾನಿಕ ಸಂಸ್ಥೆಗಳು ಕ್ರಿಯಾಶೀಲತೆಯಿಂದ ದೂರವಿರಬೇಕು ಮತ್ತು ತಮ್ಮ ಜವಾಬ್ದಾರಿಗಳಿಗೆ ಬದ್ಧವಾಗಿರಬೇಕು” ಎನ್ನುವ ಮೂಲಕ ಎನ್ ಜೆ ಎ ಸಿ (NJAC)ಯನ್ನು ತಿರಸ್ಕರಿಸಿರುವ ನ್ಯಾಯಾಂಗದ ನಿರ್ಣಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!