ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮನೆಯಲ್ಲಿ ಮತ್ತೊಮ್ಮೆ ಸಂತಸ ಮನೆ ಮಾಡಿದೆ. ಪತ್ನಿ ರಿತಿಕಾ ಸಜ್ದೇ ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
2015 ರ ಡಿಸೆಂಬರ್ 13 ರಂದು ವೈವಾಹೀಕ ಜೀವನಕ್ಕೆ ಕಾಲಿರಿಸಿದ್ದ ರೋಹಿತ್ ಮತ್ತು ರಿತಿಕಾ ಅವರಿಗೆ 2018 ರಲ್ಲಿ ಸಮೈರಾ ಎಂಬ ಮಗಳು ಜನಿಸಿದ್ದಳು.
ಇದೀಗ ರೋಹಿತ್ ಕುಟುಂಬಕ್ಕೆ ಮರಿ ಹಿಟ್ಮ್ಯಾನ್ ಆಗಮನವಾಗಿದೆ. ಇದೀಗ ಮಗನ ಜನನದ ನಂತರ ಸಂತಸದ ಅಲೆಯಲ್ಲಿ ತೇಲುತ್ತಿರುವ ರೋಹಿತ್ ಶರ್ಮಾ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕುಟುಂಬದ ಅನಿಮೇಟೆಡ್ ಫೋಟೋವನ್ನು ಹಂಚಿಕೊಂಡಿರುವ ರೋಹಿತ್ ಶರ್ಮಾ, ನಮ್ಮದು ನಾಲ್ವರು ಸದಸ್ಯರಿರುವ ಕುಟುಂಬ ಎಂದು ಬರೆದುಕೊಂಡಿದ್ದಾರೆ.
ರೋಹಿತ್ ಅವರ ಈ ಪೋಸ್ಟ್ಗೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ತಮ್ಮದೇ ಶೈಲಿಯಲ್ಲಿ ರೋಹಿತ್ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮಗುವಿನ ನಿರೀಕ್ಷೆಯಲ್ಲಿದ್ದ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದರು. ಆದರೆ ಈ ಸರಣಿ ಆರಂಭವಾಗಲು ಇನ್ನೂ 6 ಬಾಕಿ ಇದೆ. ಹೀಗಿರುವಾಗ ಪರ್ತ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಆಡುವ ಸಾಧ್ಯತೆ ಹೆಚ್ಚಿದೆ .