October 12, 2026
Monday, October 12, 2026
spot_img

ಜೂನಿಯರ್ ತೆಂಡೂಲ್ಕರ್ ಯಾರ್ಕರ್ ಅಬ್ಬರ: ಪಂತ್-ಸಮದ್ ಬೆವರಿಳಿಸಿದ ಅರ್ಜುನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 15ನೇ ಪಂದ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಸಜ್ಜಾಗುತ್ತಿದ್ದು, ಅಭ್ಯಾಸದ ವೇಳೆ ಯುವ ವೇಗಿ ಅರ್ಜುನ್ ತೆಂಡೂಲ್ಕರ್ ಎಲ್ಲರ ಗಮನ ಸೆಳೆದಿದ್ದಾರೆ. ನೆಟ್ಸ್‌ನಲ್ಲಿ ತಮ್ಮ ಬೆಂಕಿಯಂತಹ ಯಾರ್ಕರ್ ದಾಳಿಯ ಮೂಲಕ ತಂಡದ ದಿಗ್ಗಜ ಬ್ಯಾಟರ್‌ಗಳನ್ನೇ ಅರ್ಜುನ್ ಕಂಗಾಲಾಗಿಸಿದ್ದಾರೆ.

ಅಭ್ಯಾಸದ ಅವಧಿಯಲ್ಲಿ ಲಕ್ನೋ ನಾಯಕ ರಿಷಬ್ ಪಂತ್ ಅವರಿಗೆ ಸತತವಾಗಿ ನಿಖರ ಯಾರ್ಕರ್ ಎಸೆಯುವ ಮೂಲಕ ಅರ್ಜುನ್ ಬೆವರಿಳಿಸಿದರು. ಪಂತ್ ಅವರ ಲಯವನ್ನು ಪರೀಕ್ಷಿಸುವಂತೆ ದಾಳಿ ನಡೆಸಿದ ಅರ್ಜುನ್ ವಿಶ್ವಾಸದಿಂದ ಬೀಗುತ್ತಿದ್ದಾರೆ. ಕೇವಲ ಪಂತ್ ಮಾತ್ರವಲ್ಲದೆ, ಸ್ಫೋಟಕ ಬ್ಯಾಟರ್ ಅಬ್ದುಲ್ ಸಮದ್ ಕೂಡ ಅರ್ಜುನ್ ಅವರ ವೇಗದ ಎಸೆತಗಳನ್ನು ಎದುರಿಸಲು ಪರದಾಡಿದರು. ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಅವರ ಕೌಶಲ ಈ ಬಾರಿ ಎದ್ದು ಕಾಣುತ್ತಿದೆ.

ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡ ಟ್ರೇಡ್ ಮಾಡಿಕೊಂಡಿತ್ತು. ಆದರೆ, ಇಷ್ಟೂ ಪಂದ್ಯಗಳು ಕಳೆದರೂ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ.

ಈಗ ನೆಟ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಅರ್ಜುನ್ ಅವರ ಲಯ ನೋಡಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮುಂಬರುವ ಪಂದ್ಯದಲ್ಲಿ ಅವರು ಲಕ್ನೋ ಪರ ಅಧಿಕೃತವಾಗಿ ಪಾದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ರವಿಚಂದ್ರನ್ ಅಶ್ವಿನ್ ಅಥವಾ ಇತರ ಹಿರಿಯರ ಅನುಪಸ್ಥಿತಿಯಲ್ಲಿ ಅರ್ಜುನ್ ಅವರಿಗೆ ಮ್ಯಾನೇಜ್‌ಮೆಂಟ್ ಮಣೆ ಹಾಕುತ್ತಾ ಎಂಬುದು ಸದ್ಯದ ಕುತೂಹಲ.

Must Read