ʻಲಂಕೆಯಂತೆಯೇ ಕಾಂಗ್ರೆಸ್ ರಾಜಕೀಯ ಭವಿಷ್ಯ ಬಜರಂಗಬಲಿಯ ಕೋಪಕ್ಕೆ ಸುಟ್ಟು ಬಲಿಯಾಗಲಿದೆʼ

ಹೊಸದಿಗಂತ ವರದಿ ಹುಬ್ಬಳ್ಳಿ: 

ಹನುಮಂತನಿಂದ‌ ಲಂಕೆ ಹೇಗೆ ಸುಟ್ಟು ಬೂದಿಯಾಗಿದೆಯೋ, ಅದೇ ರೀತಿ ಕಾಂಗ್ರೆಸ್‌ನ ರಾಜಕೀಯ ಭವಿಷ್ಯ ಬಜರಂಗಬಲಿಯ ಆಕ್ರೋಶದಲ್ಲಿ‌ ಸುಟ್ಟು ಬಲಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ನಿಷೇಧದ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಗೊಂದಲದಲ್ಲಿ ಸಿಲುಕಿದ್ದಾರೆ. ಒಂದುಕಡೆ ವೀರಪ್ಪ ಮೊಯ್ಲಿ ಬಜರಂಗದಳ ನಿಷೇಧಿಸುವುದಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಸುರ್ಜೇವಾಲ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಿಷೇಧಿಸುತ್ತೇವೆ ಎನ್ನುತ್ತಿದ್ದಾರೆ. ಮೊದಲು ತಮ್ಮ‌ ಪಕ್ಷದ ನಿಲುವು ಅವರು ಸ್ಪಷ್ಟಪಡಿಸಲಿ. ಅವರ ಪಕ್ಷದಲ್ಲಿಯೇ ಬಜರಂಗದಳದ ಬಲ ಹಾಗೂ ಬಜರಂಗಬಲಿಯ ಭಯ ಎಷ್ಟಿದೆ ಎನ್ನುವುದು ತಿಳಿಯಬೇಕು.

ಜಗದೀಶ ಶೆಟ್ಟರ್ ಅವರು ಬಜರಂಗದಳ ನಿಷೇಧದ ಕುರಿತು ಅವರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಲಿ. ಅದನ್ನು ನಿಷೇಧಿಸುವ ಕುರಿತು ಅವರ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಲಿ’ ಎಂದು ಜೋಶಿ ಹೇಳಿದರು.

ಗೋವಾದಲ್ಲಿನ ವ್ಯವಸ್ಥೆ ನೋಡಿ ಅಲ್ಲಿಯ ಸರ್ಕಾರ ಶ್ರೀರಾಮಸೇನೆ ನಿಷೇಧಿಸಿದೆ. ಬಜರಂಗದಳ ನಮ್ಮ ಸಂಘಪರಿವಾರದ ಅಂಗಸಂಸ್ಥೆಯಾಗಿದ್ದು, ಯಾವುದೇ‌ ಪ್ರಚೋದನೆ, ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡಿಲ್ಲ. ಆದರೆ, ಕಾಂಗ್ರೆಸ್ ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವ ಪಿಎಫ್ಐ ಜೊತೆ ಬಜರಂಗದಳವನ್ನು ಹೋಲಿಕೆ ಮಾಡುತ್ತಿದೆ. ಪಿಎಫ್ಐ‌ ಸಂಘಟನೆ ಐಎಸ್ಐ ಜೊತೆ ನಂಟು ಹೊಂದಿದ್ದು, ಹಿಂದೂ‌ ರಾಷ್ಟ್ರವನ್ನು ಇಸ್ಲಾಮಿಕ್‌ ರಾಷ್ಟ್ರಮಾಡುವ ಘೋಷಣೆ ಮಾಡಿದೆ. ಇಂತಹ ದೇಶದ್ರೋಹಿ ಸಂಘಟನೆ‌ ಜೊತೆ ಅಪ್ಪಟ ಹಿಂದೂ‌ ಸಂಘಟನೆ ಹೋಲಿಕೆ ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!