ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಕಾನೂನು ಹೋರಾಟದಲ್ಲಿ ಆರಂಭಿಕ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ನಿನ್ನೆ ಅರ್ಜಿ ವಜಾಗೊಳಿಸಿತ್ತು. ಇದರ ಮಧ್ಯೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದೆ.
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ಉದಾಹರಣೆಯೊಂದಿಗೆ ಸಿದ್ದರಾಮಯ್ಯಗೆ ಮಹತ್ವದ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಹಿಂದೆ ರೈಲ್ವೆ ಸಚಿವರಾಗಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿ ರೈಲು ಅಪಘಾತ ಸಂಭವಿಸಿದ್ದಕ್ಕೆ ಅದರ ಹೊಣೆಹೊತ್ತು ರಾಜೀನಾಮೆ ನೀಡಿದ್ದರು ಎಂದರು.
ಇನ್ನು ರಾಜೀನಾಮೆ ಕೊಡುವುದು, ಬಿಡುವುದು ಸಿದ್ದರಾಮಯ್ಯಗೆ ಬಿಟ್ಟಿದ್ದು. ಇಂತಹ ಗಂಭೀರ ಆರೋಪ ಕೇಳಿಬಂದಾಗ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡಲೇಬೇಕು ಎಂಬ ಕಾನೂನಿಲ್ಲ. ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ನನಗೆ ಅನಿಸಿದಾಗ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ.
ಹೈಕೋರ್ಟ್ ಕೂಡ ಮೇಲ್ನೋಟಕ್ಕೆ ಇದರಲ್ಲಿ ಪುರಾವೆ ಇದೆ ಎಂದು ಹೇಳಿದೆ. ಹಾಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅನಿಸುತ್ತಿದೆ. ಒಂದು ವೇಳೆ ತಾವು ನಿರಪರಾಧಿ ಎಂಬುದು ಸಾಬೀತಾದರೆ ಮತ್ತೆ ಹುದ್ದೆ ಅಲಂಕರಿಸಲಿ. ಹೈಕೋರ್ಟ್ ತೀರ್ಪಿಗೂ ಮುನ್ನ ನಾನು ತಪ್ಪೇ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಕೋರ್ಟ್ ಮೇಲ್ನೋಟಕ್ಕೆ ತಪ್ಪು ನಡೆದಿದೆ ಎಂದು ಹೇಳಿದೆ. ಹೀಗಾಗಿ ಸಿದ್ದರಾಮಯ್ಯ ಅವರು ತಮ್ಮ ಮೇಲಿನ ನಂಬಿಕೆ ಉಳಿಬೇಕು ಅಂದ್ರೆ ರಾಜಿನಾಮೆ ನೀಡುವುದು ಉತ್ತಮ ಎಂದು ಸಂತೋಷ್ ಹೆಗ್ಡೆ ಸಲಹೆ ನೀಡಿದ್ದಾರೆ.