ಹೊಸದಿಗಂತ ವರದಿ, ವಿಜಯಪುರ:
ಮುಡಾ ಹಗರಣದಲ್ಲಿ ರಾಜ್ಯ ಹೈಕೋರ್ಟ್ ತೀರ್ಪನ್ನು ಗೌರವಿಸಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಮುಡಾದಲ್ಲಿ ಅಕ್ರಮವಾಗಿ 14 ಸೈಟು ಪಡೆದಿರುವುದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆಗೆ ಉತ್ತರ ಕೊಡದೆ ಪಲಾಯನ ಮಾಡಿದರು. ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಜಿ.ಎಚ್. ಪಟೇಲ್ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಸ್ಕಾರದಲ್ಲಿ ಬೆಳೆದ ಸಿದ್ದರಾಮಯ್ಯ ನಿಮಗೆ ಈತಹ ಘಟನೆ ಶೋಭೆ ತರುವಂತಹದಲ್ಲ. ನೈತಿಕ ಹೊಣೆ ಹೊತ್ತು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಹೋಗುತ್ತಿದ್ದರು. ಇದೇ ಏನು ನೀವು ಸಂವಿಧಾನಕ್ಕೆ, ಕಾನೂನಿಗೆ ಬೆಲೆ ಕೊಡುವ ರೀತಿ ಎಂದು ಪ್ರಶ್ನಿಸಿದರು.
ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾಗಿ ಹೈಕೋರ್ಟ್ ತನಿಖೆ ಆದೇಶಿಸಿದರೂ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶನ ಮಾಡುತ್ತಿರುವರಿ ಎಂದು ದೂರಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ್, ಕಾಸುಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿಗಳಾದ ಮುಳುಗೌಡ ಪಾಟೀಲ, ಈರಣ್ಣ ರಾವೂರ್, ಸಾಬು ಮಾಶಾಳ, ಸಂಜಯ ಐಹೊಳೆ, ಉಮೇಶ್ ಕೋಳ್ಕೂರ್, ಗೋಪಾಲ್ ಘಟಕಾಂಬಳೆ, ಶಂಕರ ಹೂಗಾರ, ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ಜವಹಾರ ಗೋಸಾವಿ, ಮುಖಂಡರಾದ ರವಿಕಾಂತ ಬಗಲಿ, ಗುರುಲಿಂಗಪ್ಪ ಅಂಗಡಿ, ಮಹೇಂದ್ರ ನಾಯಕ್, ಸುರೇಶ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ, ಭೀಮಾಶಂಕರ ಹದನೂರು, ಸಪ್ನಾ ಕಣ್ಮುಚನಾಳ, ಮಲ್ಲಮ್ಮ ಜೋಗುರು, ವಿಜಯ ಜೋಶಿ ಇದ್ದರು.