ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷಿ ಕ್ಷೇತ್ರಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದವು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬೆಳಗಾವಿಯ ಸುವರ್ಣಸೌಧದ ಬಳಿ ರೈತರು ಪ್ರತಿಭಟನೆ ನಡೆಸಿದರು.
ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಬೇಕು. ಟನ್ ಕಬ್ಬಿಗೆ ಕಾರ್ಖಾನೆಗಳಿಂದ ಸರಕಾರಕ್ಕೆ ಹೋಗುತ್ತಿರುವ 5 ಸಾವಿರ ರೂ.ಗಳ ತೆರಿಗೆ ಹಣದಲ್ಲಿಯ 2 ಸಾವಿರ ರೂ.ಗಳನ್ನು ರೈತರಿಗೆ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಕಾಯ್ದೆ ತಿದ್ದುಪಡಿ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಹಗಲು ಹೊತ್ತು ನಿರಂತರ 12 ಗಂಟೆ ಥ್ರೀ ಫೇಸ್ ವಿದ್ಯುತ್ ಹಾಗೂ ರಾತ್ರಿ ನಿರಂತರ ಸಿಂಗಲ್ ಫೇಸ್ ವಿದ್ಯುತ್ ಕಡ್ಡಾಯವಾಗಿ ಪೂರೈಕೆ ಮಾಡಬೇಕು. ಅಕ್ರಮ-ಸಕ್ರಮ ಹಾಗೂ ಶೀಘ್ರ ಸಂಪರ್ಕ ಯೋಜನೆಯನ್ನು ಮುಂದುವರೆಸಬೇಕು.
ಭತ್ತದ ಬೆಳೆಗೆ ಕನಿಷ್ಠ ಪ್ರತಿ ಕ್ವಿಂಟಾಲ್ ಗೆ 5. ಸಾವಿರ ರೂ.ದರ ನೀಡಬೇಕು. ದ್ರಾಕ್ಷಿ (ಒಣ) ಬೆಳೆಗೆ ಪ್ರತಿ ಕೆಜಿಗೆ 400 ರೂ. ಬೆಂಬಲ ಬೆಲೆ ನೀಡಬೇಕು. ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು, ಭೂಸ್ವಾಧೀನ ಕಾಯ್ದೆಯ ತಿದ್ದುಪಡಿ, ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಬೇಕು.
ರಾಜ್ಯದಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪುನಃಚೇತನಗೊಳಿಸಬೇಕು. ಮಹದಾಯಿ, ಕಳಸಾ ಬಂಡೂರಿ ಮೇಕೆದಾಟು ಯೋಜನೆ ಸೇರಿದಂತೆ ಬಾಕಿ ಉಳಿದ ನೀರಾವರಿ ಯೋಜನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಆಲಮಟ್ಟಿ ಜಲಾಶಯವನ್ನು ಮೇಲ್ದರ್ಜೇಗೇರಿಸಬೇಕು ಎಂದು ಒತ್ತಾಯಿಸಿದರು.