ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಹಿರಿಯ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ವಿವಾಹ ಸಮಾರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ದಿನಾಂಕ ನಿಗದಿಯಾಗಿದೆ ಎನ್ನಲಾಗುತ್ತಿದೆ.
ಜನವರಿ 23ರಂದು ಸುನಿಲ್ ಶೆಟ್ಟಿ ಅವರ ಖಂಡಾಲ ನಿವಾಸದಲ್ಲಿ ಅದ್ದೂರಿ ಸಮಾರಂಭ ನಡೆಯಲಿದೆ. ಜನವರಿ 21ರಿಂದಲೇ ಪೂರ್ವಭಾವಿ ಕಾರ್ಯಕ್ರಮಗಳು ನಡೆಯಲಿವೆ ಎನ್ನಲಾಗಿದೆ. ಒಟ್ಟು ಮೂರು ದಿನಗಳ ಕಾಲ ಈ ಸಮಾರಂಭ ನಡೆಯಲಿದ್ದು, ಈಗಾಗಲೇ ಸುನಿಲ್ ಶೆಟ್ಟಿ ತಮ್ಮ ಪುತ್ರಿಯ ವಿವಾಹ ಸಮಾರಂಭಕ್ಕೆ ಕ್ರಿಕೆಟ್ ಹಾಗೂ ಬಾಲಿವುಡ್ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಿದ್ದಾರೆ.
ಮೂಲಗಳ ಪ್ರಕಾರ ಖ್ಯಾತ ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಜಾಕಿ ಶ್ರಾಫ್, ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮೊದಲಾದವರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದು, ಆಪ್ತರು ಹಾಗೂ ಕೆ.ಎಲ್. ರಾಹುಲ್ ಮತ್ತು ಸುನಿಲ್ ಶೆಟ್ಟಿ ಕುಟುಂಬ ಸದಸ್ಯರು ಮಾತ್ರ ಹಾಜರಿರಲಿದ್ದಾರೆ ಎನ್ನಲಾಗಿದೆ.