ಹೊಸದಿಗಂತ ವರದಿ, ವಿಜಯನಗರ:
ಹೊಸಪೇಟೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಗೈರು ಆಗುವ ಮೂಲಕ ಕಾಂಗ್ರೆಸ್ ವಿಪ್ ಉಲ್ಲಂಘಿಸಿದ ೨೦ನೇ ವಾರ್ಡ್ ಸದಸ್ಯ ಖಾರದಪುಡಿ ಮಹೇಶ್ ಕುಮಾರ್ ಗೆ ಇದೀಗ ನಗರಸಭೆ ಸದಸ್ಯತ್ವ ರದ್ದಾಗುವ ಭೀತಿ ಶುರುವಾಗಿದೆ.
ಈ ಕುರಿತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್ ಅವರು ಮಂಗಳವಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಸೆ.೧೨ ರಂದು ಹೊಸಪೇಟೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಕಡ್ಡಾಯವಾಗಿ ಹಾಜರಾಗಿ, ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಸೂಚಿಸಿ ಕಾಂಗ್ರೆಸ್ ಪಕ್ಷದ ೨೦ನೇ ವಾರ್ಡ್ ಸದಸ್ಯ ಕೆ.ಮಹೇಶ್ ಕುಮಾರ್ ಪಕ್ಷದ ವಿಫ್ (ಸಚೇತಕಾದೇಶ) ಜಾರಿಗೊಳಿಸಲಾಗಿತ್ತು. ಆದರೆ, ನಗರಸಭಾ ಚುನಾವಣೆಗೆ ಗೈರು ಹಾಜರಾಗಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ. ಜೊತೆಗೆ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ.
ಪಕ್ಷಕ್ಕೆ ದ್ರೋಹ ಎಸಗಿದ ನಗರಸಭೆ ಸದಸ್ಯ ಕೆ.ಮಹೇಶ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅಧಿನಿಯಮ ೧೯೮೭ ಕಲಂ-೩ರ ಪ್ರಕಾರ ಮತ್ತು ೧೯೯೫ರ ತಿದ್ದುಪಡಿಗಳ ಅನ್ವಯ ಕೆ.ಮಹೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸುವ ಜೊತೆಗೆ ನಗರಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿಯ ಎನ್.ರೂಪೇಶ್ ಕುಮಾರ್ ನಗರಸಭೆ ಅಧ್ಯಕ್ಷರಾಗಿ, ರಮೇಶ್ ಗುಪ್ತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು ಎಂದು ಇಲ್ಲಿ ಸ್ಮರಿಸಬಹುದು.