ಹೊಸದಿಗಂತ ವರದಿ, ಮಂಡ್ಯ :
ಕೆಆರ್‌ಎಸ್ ಭರ್ತಿಯಾಗಿ ಹದಿನೈದು ದಿನಳಾದರೂ ವಿಶ್ವೇಶ್ವರಯ್ಯ ನಾಲಾ ಕೊನೆಯ ಭಾಗಕ್ಕೆ ನೀರು ತಲುಪದಿರುವುದು, ಕೆರೆಗಳನ್ನು ತುಂಬಿಸದಿರುವುದು ನೀರು ನಿರ್ವಹಣೆಯಲ್ಲಾಗುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮಧು ಜಿ.ಮಾದೇಗೌಡ ಅವರು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಮಂಗಳವಾರ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಳವಳ್ಳಿ ಭಾಗಕ್ಕೆ ಹೆಬ್ಬಕವಾಡಿ ಬಳಿ ಸುತ್ತುಕಟ್ಟೆಯಿಂದ ಹೆಚ್ಚು ನೀರು ಹರಿದುಬರುತ್ತದೆ. ಆ ನಾಲೆಯಲ್ಲಿ 1000 ಕ್ಯುಸೆಕ್ ನೀರು ಹರಿಯಬೇಕಿದ್ದು, ಅಲ್ಲಿ 750 ಕ್ಯುಸೆಕ್‌ನಿಂದ 850 ಕ್ಯುಸೆಕ್ ನೀರು ಹರಿಸುತ್ತಿದ್ದೀರಿ. ನೀರು ತಲುಪುವುದಕ್ಕೆ ಹೇಗೆ ಸಾಧ್ಯ ಎಂದು ಕೆಆರ್‌ಎಸ್ ಅಧಿಕ್ಷಕ ಇಂಜಿನಿಯರ್ ರಘುರಾಮ್ ಅವರನ್ನು ಪ್ರಶ್ನಿಸಿದರು.