ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರೀಡಂ ಪಾರ್ಕ್‌ನಲ್ಲಿ ಇಂದು ನಡೆದ ‘ಜಿ ರಾಮ್ ಜಿ’ ಯೋಜನೆ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯು ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ನಾಯಕರ ನಡುವಿನ ಆಪ್ತ ಸ್ನೇಹಕ್ಕೂ ಸಾಕ್ಷಿಯಾಯಿತು.
ಪ್ರತಿಭಟನೆಯ ಕಾವು ಏರುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೆಗಲ ಮೇಲಿದ್ದ ಟವೆಲ್‌ಅನ್ನು ಸ್ಟೈಲಿಶ್ ಆಗಿ ತಲೆಗೆ ಪೇಟದಂತೆ ಸುತ್ತಿಕೊಂಡರು. ಇದನ್ನು ಗಮನಿಸಿದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ತಲೆಗೆ ಟವೆಲ್ ಸುತ್ತಿಕೊಂಡು ಸಾಥ್ ನೀಡಿದರು.
ಆದರೆ ಅಸಲಿ ಮಜಾ ಶುರುವಾಗಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಷಣ ಮುಗಿಸಿ ವೇದಿಕೆಗೆ ಮರಳಿದಾಗ. ಸುರ್ಜೇವಾಲ ಅವರು ಡಿಕೆಶಿ ತಲೆಗೆ ಟವೆಲ್ ಸುತ್ತಲು ಪ್ರಯತ್ನಿಸಿದರಾದರೂ ಅದು ಸರಿಯಾಗಿ ಕೂರಲಿಲ್ಲ. ಕೂಡಲೇ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ನಗುನಗುತ್ತಲೇ ತಾವೇ ಖುದ್ದಾಗಿ ಡಿಕೆಶಿ ತಲೆಗೆ ಅಚ್ಚುಕಟ್ಟಾಗಿ ಟವೆಲ್ ಪೇಟ ಸುತ್ತಿದರು. ಈ ಅಪರೂಪದ ಕ್ಷಣದ ಬಳಿಕ ಮೂವರು ನಾಯಕರು ಪೇಟ ಧರಿಸಿ ಒಟ್ಟಾಗಿ ಫೋಟೋಗೆ ಫೋಸ್ ನೀಡಿದ್ದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತು.
ಪ್ರತಿಭಟನೆಯ ನಂತರ ಕಾಂಗ್ರೆಸ್ ನಾಯಕರು ಲೋಕಭವನಕ್ಕೆ ಮುತ್ತಿಗೆ ಹಾಕಲು ಸನ್ನದ್ಧರಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಲೋಕಭವನದ ಸುತ್ತಮುತ್ತ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಲು ಕೇವಲ 26 ನಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಫ್ರೀಡಂ ಪಾರ್ಕ್‌ನಿಂದ ನಾಯಕರನ್ನು ಕರೆದೊಯ್ಯಲು ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.



