ಗಡಿಗಳೇ ಇಲ್ಲದ, ಸೇವೆಯೇ ದೃಷ್ಟಿಯಲ್ಲಿಟ್ಟುಕೊಂಡಿರುವ ದೇಶ ಕೈಲಾಸ, ನಾನೇ ಹಿಂದುಗಳ ಪ್ರಧಾನ ಗುರು: ನಿತ್ಯಾನಂದ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಕ್ವೆಡಾರ್‌ನಲ್ಲಿ ದ್ವೀಪ ಖರೀದಿಸಿ, ‘ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ’ ಎಂಬ ದೇಶ ನಿರ್ಮಿಸಿರುವ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ (Swami Nityananda) ಕುರಿತು ಕೆಲವು ದಿನಗಳಿಂದ ಭಾರತ ಮಾತ್ರವಲ್ಲ, ಅಮೆರಿಕ, ಬ್ರಿಟನ್‌ನಲ್ಲೂ ಚರ್ಚೆಯಾಗುತ್ತಿದೆ.

ಈತ ಅಮೆರಿಕದ 30 ನಗರಗಳಿಗೆ ಒಪ್ಪಂದದ ಹೆಸರಿನಲ್ಲಿ ವಂಚಿಸಿರುವ ಕುರಿತು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಹಾಗೆಯೇ, ಈತನ ದೇಶವು ಕಾಲ್ಪನಿಕ ಸೃಷ್ಟಿ ಎಂದೂ ಕರೆದಿವೆ.

ಈ ಎಲ್ಲದರ ನಡುವೆ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸವು ಗಡಿಗಳೇ ಇಲ್ಲದ, ಸೇವೆಯೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡಿರುವ ದೇಶ. ನಾನು ಹಿಂದು ಧರ್ಮದ ಪ್ರಧಾನ ಗುರು ಎಂಬುದಾಗಿ ನಿತ್ಯಾನಂದ ಹೇಳಿದ್ದಾನೆ.

ನೋಂದಾಯಿತ ಪತ್ರಕರ್ತರ ಪ್ರಶ್ನೆಗಳಿಗೆನಿತ್ಯಾನಂದನ ಮಾಧ್ಯಮ ಕಾರ್ಯದರ್ಶಿಯು ಪ್ರತಿಕ್ರಿಯಿಸಿದ್ದಾರೆ. ‘ಕೈಲಾಸ ದೇಶವು ಜಗತ್ತಿನ ಹಲವು ಎನ್‌ಜಿಒಗಳು, ದೇವಾಲಯಗಳು, ಸಂಸ್ಥೆಗಳಿಂದ ನಡೆಯುತ್ತಿದೆ. ಹಾಗಾಗಿ, ಇದಕ್ಕೆ ಗಡಿ ಎಂಬುದಿಲ್ಲ. ಸೇವೆಯನ್ನೇ ಮನೋಧರ್ಮವನ್ನಾಗಿ ಇಟ್ಟುಕೊಂಡು ನಿರ್ಮಿಸಿರುವ ದೇಶ ಇದಾಗಿದೆ’ ಎಂದು ತಿಳಿಸಿದ್ದಾರೆ.

ನಿತ್ಯಾನಂದನ ದೇಶದ ಲೊಕೇಷನ್‌, ಜನಸಂಖ್ಯೆ ಕುರಿತ ಕೇಳಿದ ಪ್ರಶ್ನೆಗೆ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ‘ನಾವು ಪುರಾತನ ಹಿಂದು ನಾಗರಿಕತೆಯ ಪುನರುಜ್ಜೀವನದ ಕಾರ್ಯದಲ್ಲಿ ತೊಡಗಿದ್ದೇವೆ. ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಹಲವಾರು ಎನ್‌ಜಿಒಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಜಗತ್ತಿನ ಎನ್‌ಜಿಒಗಳು ನಮ್ಮ ದೇಶದ ಭಾಗವಾಗಿವೆ. ಹಾಗಾಗಿ, ನಮ್ಮ ದೇಶಕ್ಕೆ ಗಡಿಯೇ ಇಲ್ಲ’ ಹೇಳಿದ್ದಾರೆ.

ಹಿಂದು ಧರ್ಮದ ಪ್ರಧಾನ ಗುರು

ನಿತ್ಯಾನಂದ ಯಾರು ಎಂದರೆ ‘ಪರಮಶಿವಂ ಅವರು ಕೈಲಾಸವನ್ನು ಪುನರುಜ್ಜೀವನಗೊಳಿಸಿದ, ಹಿಂದು ಧರ್ಮದ ಪ್ರಧಾನ ಗುರು ಆಗಿದ್ದಾರೆ. ಅವರು ಹಿಂದು ಧರ್ಮದ ಆಚಾರ-ವಿಚಾರಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವ, ಹಿಂದು ಧರ್ಮದ ಗ್ರಂಥಗಳಲ್ಲಿ ಉಲ್ಲೇಖಿಸುವ ಅಂಶಗಳನ್ನು ಆಧರಿಸಿಯೇ ಬೋಧನೆ ಮಾಡುವ ಧರ್ಮಗುರು ಆಗಿದ್ದಾರೆ’ ಎಂದಿದ್ದಾರೆ.

ಭಾರತದಿಂದ ಓಡಿಬಂದಿದ್ದು ನಿಜವೇ?

ಭಾರತದಲ್ಲಿ ಪರಾರಿಯಾಗಿರುವ ಕುರಿತ ಆರೋಪವಿದ್ದು, ಈ ಕುರಿತು ಮಾತನಾಡಿದ ಅವರು, ‘ನಿತ್ಯಾನಂದ ಅವರು ಯಾವುದೇ ಅಪರಾಧ ಎಸಗಿಲ್ಲ. ಅವರು ನಿರಪರಾಧಿ ಎಂಬ ಕುರಿತು ಜಗತ್ತಿನ ಸಂಸ್ಥೆಗಳೇ ಹೇಳಿವೆ’ ಎಂಬುದಾಗಿ ತಿಳಿಸಲಾಗಿದೆ.

ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದನು ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಸಿಲುಕಿದ್ದು, 2019ರಲ್ಲಿಯೇ ಭಾರತದಿಂದ ಕಾಲ್ಕಿತ್ತಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!