ಬಿಸಿಲಿನ ನಾಡಿಗೆ ಲಗ್ಗೆಯಿಟ್ಟ ಡ್ರ್ಯಾಗನ್ – ವಿದೇಶಿ ಹಣ್ಣು ಬೆಳೆದು ಯಶಸ್ಸು ಕಂಡ ರೈತ

– ರಾಚಪ್ಪಾ ಜಂಬಗಿ

ಬೆಳೆ ಸರಿಯಾಗಿ ಬರುತ್ತಿಲ್ಲ. ಇಳುವರಿ ಬಾರದೆ ಆದಾಯವೂ ಸಿಗುತ್ತಿಲ್ಲ ಎಂದು ರೈತರು ಚಿಂತೆಯಲ್ಲಿ ಕಂಗಾಲಾಗುತ್ತಿರುವ ಹೊತ್ತಲ್ಲಿ ಸಾಂಪ್ರದಾಯಿಕ ಕೃಷಿ ಬಿಟ್ಟು ಬಿಸಿಲು ನಾಡಿನ ಪ್ರದೇಶದಲ್ಲಿ ಅಪರೂಪದ ವಿದೇಶಿ ಹಣ್ಣು ಡ್ರ್ಯಾಗನ್ ಬೆಳೆದು ಯಶಸ್ಸು ಕಂಡಿದ್ದಲ್ಲದೇ ಭರಪೂರ ಆದಾಯದ ಜೊತೆಗೆ ನೆಮ್ಮದಿ ಜೀವನ ನಡೆಸಿ ಇತರ ರೈತರಿಗೆ ಸಿದ್ಧಾರೂಢ ಕೋಸಂಬಿ ಮಾದರಿಯಾಗಿದ್ದಾರೆ.
ಕಲಬುರಗಿ ತಾಲೂಕಿನ ಅಷ್ಟಗಿ ಗ್ರಾಮದ ಸಿದ್ಧಾರೂಢ ಕೋಸಂಬಿ ಮೂಲತಃ ಕಲಬುರಗಿ ಜಿಲ್ಲೆಯವರು. ತಮ್ಮ ಮೂರು ಎಕರೆಯ ತೋಟದಲ್ಲಿ ಸಾಂಪ್ರದಾಯಿಕ ಕೃಷಿ ಬಿಟ್ಟು ವಿದೇಶಿ ಹಣ್ಣು (ಡ್ರ್ಯಾಗನ್) ಬೆಳೆಯುವುದರ ಮೂಲಕ ಬಿಸಿಲು ನಾಡಿನ ರೈತರಿಗೆ ಮಾದರಿಯಾಗಿದ್ದಾರೆ. ಡ್ರ್ಯಾಗನ್ ಜೊತೆಗೆ ಮತ್ತೊಂದು ಮೂರು ಎಕರೆಯಲ್ಲಿ ಪೇರು,ಶ್ರೀಗಂಧ, ಮಾವು ಸೇರಿದಂತೆ ಇತರೆ ಹಣ್ಣು ಬೆಳೆದು ಲಕ್ಷ ಲಕ್ಷ ಆದಾಯ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ರೈತನ ಮೂರು ಸೂತ್ರಗಳು
ಒಂದು ನಿರ್ವಹಣೆ, ಇಳುವರಿ ಮತ್ತು ಮಾರುಕಟ್ಟೆಯಲ್ಲಿ ಲಾಭ. ಇವುಗಳನ್ನು ಸುಲಭವಾಗಿ ನಿಭಾಯಿಸಬಹುದು ಎಂಬುದು ಖಚಿತವಾದರೆ ರೈತರು ಅಂತಹ ಬೆಳೆ ಬೆಳೆಯುವುದಕ್ಕೆ ಹೆಚ್ಚು ಆಸಕ್ತಿ ಹಾಗೂ ಧೈರ್ಯ ತೋರುತ್ತಾನೆ. ಇದೇ ನಿಟ್ಟಿನ ಪರಿಣಾಮವೇ ಡ್ರ್ಯಾಗನ್ ಕೂಡ ಒಂದು. ಒಂದು ಎಕರೆಗೆ 350ಕ್ಕೂ ಅಕ ಗಿಡಗಳನ್ನು ನೆಟ್ಟಿರುವ ಸಿದ್ಧಾರೂಢ, ಮೂರು ಎಕರೆಯಲ್ಲಿ ಸರಿ ಸುಮಾರು 600ಕ್ಕಿಂತ ಅಕ ಗಿಡಗಳನ್ನು ನೆಟ್ಟಿದ್ದಾರೆ. ಇನ್ನೂ ಡ್ರ್ಯಾಗನ್ ತಳಿಯಲ್ಲಿ ಎರಡು ವಿಧಗಳಿದ್ದು, ಒಂದು ಪಿಂಕ್ ಇನ್ನೊಂದು ವೈಟ್. ಎಕರೆಗೆ 2 ಲಕ್ಷ 80 ಸಾವಿರ ಖರ್ಚು ಮಾಡಿದ್ದಾರೆ.

ಬೆಂಗಳೂರಿನಿಂದ ವಾಪಸ್
ಕಂಪ್ಯೂಟರ್ ಸೈನ್ಸ್ ಓದಿರುವ ಇವರು ಬೆಂಗಳೂರಿಗೆ ಹೋಗಿ 9 ವರ್ಷಗಳಿಂದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂಬಳ ಸಾಲದೇ ಚಿಂತೆಯಲ್ಲಿದ್ದ ಅವರು, ಸ್ವಂತ ಜಮೀನಿನಲ್ಲೆ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಕಲಬುರಗಿಗೆ ವಾಪಸ್ ಬಂದು ಡ್ರ್ಯಾಗನ್ ಬೆಳೆಯಲು ಆರಂಭಿಸಿದ್ದಾರೆ. ಡ್ರ್ಯಾಗನ್ ಹಣ್ಣು 1 ಕೆಜಿಗೆ 200 ರಿಂದ 300 ರೂ. ಮಾರಾಟ ಮಾಡಬಹುದಾಗಿದೆ.

ಡ್ರ್ಯಾಗನ್ ಹಣ್ಣಿನ ಸಂರಕ್ಷಣೆ
ಈ ಹಣ್ಣು ವಿದೇಶಿ ತಳಿಯಾಗಿರುವುದರಿಂದ ಇದರ ಕಾಳಜಿ ಅಗತ್ಯ. ಇದು ಹೂ ಬಿಟ್ಟಾಗ ಹೂಜಿ ಬಾಸುತ್ತದೆ. ಚಳಿಗಾಲದಲ್ಲಿ ಕೆಲವು ಕೀಟಗಳು ಈ ಗಿಡಕ್ಕೆ ಅಂಟಿಕೊಳ್ಳಬಹುದು. ಹೀಗಾಗಿ ರೈತರು ಇದಕ್ಕೆ ಎಣ್ಣೆ ಸಿಂಪಡಿಸಿ ಬಿಟ್ಟರೆ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಉತ್ತಮ ಹಣ್ಣು ಬೆಳೆಯಲು ರೈತರು ದನದ ಗೊಬ್ಬರವನ್ನು ಹಾಕುತ್ತಾರೆ. ಇದಕ್ಕೆ ನೀರಿಗಿಂತ ಬಿಸಿಲು ಜಾಸ್ತಿ ಬೇಕಾಗುತ್ತದೆ. ಕಲಬುರಗಿಯಲ್ಲಿ ತೊಗರಿ,ಹತ್ತಿ,ಕಬ್ಬು,ಸೋಯಾಬಿನ ಹೆಚ್ಚು ಬೆಳೆಯುವ ನಾಡಿನಲ್ಲಿ ಡ್ರ್ಯಾಗನ್ ಬೆಳೆದು ಜಿಲ್ಲೆಯ ಇತರ ರೈತರಿಗೆ ಮಾದರಿಯಾದ್ದಾರೆ.

“ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಡ್ರ್ಯಾಗನ್ ಹಣ್ಣನ್ನು ಬೆಳೆದಿದ್ದೇನೆ. ಸದ್ಯಕ್ಕೆ ಸ್ಥಳೀಯ ಮಾರುಕಟ್ಟೆಗೆ ಹಣ್ಣುಗಳನ್ನು ಸರಬರಾಜು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮುಂಬೈ, ಹೈದ್ರಾಬಾದ್, ತೆಲಂಗಾಣ ಪ್ರದೇಶಗಳಿಗೆ ಮಾರಾಟ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇನೆ.” – ಸಿದ್ಧಾರೂಢ ಡಿ.ಕೋಸಂಬಿ, ಪ್ರಗತಿಪರ ರೈತ

 

“ಬಿಸಿಲಿಗೆ ಹೆಚ್ಚು ಹೊಂದಿಕೊಳ್ಳುವುದರಿಂದ ಬಿಸಿಲಿನ ಜಾಗದಲ್ಲಿ ಈ ಹಣ್ಣು ಬೆಳೆಯಬಹುದು. ಹೆಚ್ಚು ರೋಗ ನಿರೋಧಕ, ರಕ್ತ ಹಿನತೆಗೆ ಉಪಯೋಗಕಾರಿಯಾದ ಹಣ್ಣು. ಈ ಭಾಗದಲ್ಲಿ 50-100 ಎಕರೆಯಲ್ಲಿ ಡ್ರ್ಯಾಗನ್ ಬೆಳೆಯುತ್ತಿದ್ದಾರೆ.”

ಡಾ.ವಾಸುದೇವ ನಾಯಕ,
ವಿಜ್ಞಾನಿ, ಕೃಷಿ ವಿಶ್ವವಿದ್ಯಾಲಯ ಕೇಂದ್ರ ಕಲಬುರಗಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!