Monday, October 3, 2022

Latest Posts

ಕಲಬುರಗಿ-ಕೊಲ್ಲಾಪೂರ ನೂತನ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ

ಹೊಸದಿಗಂತ ವರದಿ, ಕಲಬುರಗಿ:

ಕಲಬುರಗಿ-ಶ್ರೀ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ ನಡುವಿನ ನೂತನ ಚೇರ್‍ಕಾರ್ ಎಕ್ಸ್‍ಪ್ರೆಸ್ (ಸಿಟ್ಟಿಂಗ್) ರೈಲಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ಕೇಂದ್ರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳಿಯಿಂದ ವರ್ತುವಲ್ ವೇದಿಕೆ ಮೂಲಕ ಸೋಲಾಪುರ-ಮಿರಾಜ್ ಎಕ್ಸ್‍ಪ್ರೆಸ್ ಈ ರೈಲನ್ನು ಕಲಬುರಗಿ-ಕೊಲ್ಲಾಪೂರ ವಿಸ್ತರಣೆಯ ಆರಂಭಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ 1ರಲ್ಲಿ ನೂತನ ರೈಲಿನ ಆರಂಭಿಕ ಸಂಚಾರದ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಸಂಸದ ಡಾ.ಉಮೇಶ ಜಾಧವ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಸ್ಥಳೀಯವಾಗಿ ಹಸಿರು ನಿಶಾನೆ ತೋರಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ, 2014ರ ನಂತರ ಹೊಸ ರೈಲ್ವೆ ಲೈನ್, ಡಬ್ಲಿಂಗ್, ವಿದ್ಯುದ್ದೀಕರಣ ಕಾರ್ಯದಲ್ಲಿ ದಾಖಲೆ ನಿರ್ಮಿಸಲಾಗಿದೆ. 2007-14ರ ಅವಧಿಯಲ್ಲಿ 4,337 ಕಿ.ಮೀ ಎಲೆಕ್ಟ್ರಿಫಿಕೇಷನ್ ಆಗಿದ್ದರೆ, 2014-22ರ ಅವಧಿಯಲ್ಲಿ 30,446 ಕಿ.ಮೀ. ವಿದ್ಯುತ್ ಲೈನ್ ಕಾಮಗಾರಿ ಮಾಡಲಾಗಿದೆ. ಕೋವಿಡ್ ನಂತರ 2021-22 ವರ್ಷದಲ್ಲಿಯೇ 6,366 ಕಿ.ಮೀ. ಪೂರ್ಣಗೊಳಿಸಿದೆ. ಅದೇ ರೀತಿ ಹಿಂದಿನ ಸರ್ಕಾರದ ಅವಧಿಯ 7 ವರ್ಷದಲ್ಲಿ 2,700 ಕಿ.ಮಿ. ಡಬ್ಲಿಂಗ್ ಕಾರ್ಯವಾಗಿದ್ದರೆ, ನಮ್ಮ ಸರ್ಕಾರದ ಇಷ್ಟೆ ಅವಧಿಯಲ್ಲಿ 12,000 ಕಿ.ಮಿ. ಹಳಿ ಡಬ್ಲಿಂಗ್ ಮಾಡಿದ್ದೇವೆ ಎಂದರು.

ವಂದೆ ಮಾತರಂ ರೈಲು ಕೊಡಿ:

ಸ್ವಚ್ಛತೆ, ಬಯೋ ಟಾಯಲೆಟ್, ವೈಫೈ ವ್ಯವಸ್ಥೆ, ಮೆಟ್ರೋ ರೈಲಿಗೆ ಸಂಪರ್ಕ ಹೀಗೆ ಒಟ್ಟಾರೆ ವಿಶ್ವ ದರ್ಜೆಯ ಸೇವೆಯನ್ನು ರೈಲ್ವೆ ಇಲಾಖೆ ನೀಡುತ್ತಿದೆ. ಪ್ರತಿ ವ್ಯಕ್ತಿಯ ಸಾರಿಗೆ ಸಂಪರ್ಕದ ವೆಚ್ಚ ಕಡಿಮೆಗೊಳಿಸುವುದೇ ನಮ್ಮ ಗುರಿಯಾಗಿದೆ ಎಂದ ಪ್ರಹ್ಲಾದ ಜೋಷಿ ಅವರು, ಕರ್ನಾಟಕಕ್ಕೆ ಮುಂದಿನ ದಿನದಲ್ಲಿ 2-3 ವಂದೆ ಮಾತರಂ ರೈಲು ನೀಡಬೇಕೆಂದು ಕೇಂದ್ರದ ಕಲ್ಲಿದ್ದಲ್ಲು ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ ಸಾಹೆಬ್ ದಾದಾರವ್ ಪಟೀಲ ದಾನ್ವೆ ಅವರಲ್ಲಿ ಕೋರಿಕೊಂಡರು.

ಕೇಂದ್ರದ ಕಲ್ಲಿದ್ದಲ್ಲು ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ ಸಾಹೆಬ್ ದಾದಾರವ್ ಪಟೀಲ ದಾನ್ವೆ ಮಾತನಾಡಿ, ಧಾರ್ಮಿಕ ಕ್ಷೇತ್ರ ಕೊಲ್ಲಾಪೂರದ ಮಹಾಲಕ್ಷ್ಮೀಗೆ ಸಂಪರ್ಕ ಸಾಧಿಸುವ ಕಲಬುರಗಿ-ಕೊಲ್ಲಾಪೂರ ರೈಲು ಆರಂಭದಿಂದ ಈ ಭಾಗದ ರೈತರು, ಉದ್ಯಮಿಗಳು, ಯಾತ್ರಿಗಳು, ದೈನಂದಿನ ಓಡಾಟ ಮಾಡುವರಿಗೆ ತುಂಬಾ ಅನುಕೂಲವಾಗಲಿದೆ. ಬಹುದಿನಗಳ ಬೇಡಿಕೆ ಇದಾಗಿತ್ತು ಎಂದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಶ್ರೀ ಶರಣಬಸವೇಶ್ವರ ನೆಲ ಕಲಬುರಗಿಯಿಂದ ಹೊರಡುವ ನೂತನ ರೈಲು, ಗಾಣಗಾಪೂರ ದತ್ತಾತ್ರೇಯ, ಅಕ್ಕಲಕೋಟ್, ಸೋಲಾಪೂರ ಸಿದ್ದೇಶ್ವರ, ಪಂಡರಾಪೂರ ಕೊನೆಗೆ ಮಹಾಲಕ್ಷ್ಮೀಯ ಕೊಲ್ಲಾಪೂರ ವರೆಗೆ ಹೀಗೆ ಧಾರ್ಮಿಕ ಕ್ಷೇತ್ರಗಳ ನಡುವೆ ಸಂಚರಿಸಲಿದ್ದು, ವಿಶೇಷವಾಗಿ ಭಕ್ತ ವೃಂದಕ್ಕೆ, ಸ್ಥಳೀಯ ಕಾರ್ಮಿಕರು, ರೈತರಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಬಹುದಿನ ಬೇಡಿಕೆಯನ್ನು ಈಡೇರಿಸಿದ ಪ್ರಧಾನಮಂತ್ರಿ ಮತ್ತು ರೈಲ್ವೆ ಸಚಿವರಿಗೆ ಅಭಿನಂದನೆ ತಿಳಿಸುವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!