ಹೊಸದಿಗಂತ ವರದಿ ಕಲಬುರಗಿ:
ನಗರದ ಹೊರವಲಯದಲ್ಲಿರುವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಪರಾರಿಯಾದ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಘಟನೆ ನಡೆದ 40 ಗಂಟೆಗಳು ಕಳೆದರೂ ಇಬ್ಬರು ಆರೋಪಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಮಂಗಳವಾರ ನಸುಕಿನ ಜಾವ ಸುಮಾರು 4.40ರ ವೇಳೆಗೆ ಪೋಕ್ಸೋ ಹಾಗೂ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳು ಬ್ಯಾರಕ್‌ನ ಕಬ್ಬಿಣದ ಗ್ರಿಲ್‌ಗಳನ್ನು ಕತ್ತರಿಸಿ ಹೊರಬಂದ ಬಳಿಕ ಸುಮಾರು 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಹಾರಿ ಪರಾರಿಯಾಗಿದ್ದಾರೆ. ಈ ಸಂಪೂರ್ಣ ದೃಶ್ಯ ಜೈಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕಲಬುರಗಿ ನಗರ ಹಾಗೂ ಜಿಲ್ಲಾ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪರಾರಿಯಾಗಿದ್ದ ಮೂವರ ಪೈಕಿ ಸಂತೋಷ್ ಎಂಬಾತನನ್ನು ಕಪನೂರ ಕೈಗಾರಿಕಾ ಪ್ರದೇಶದ ಬಳಿ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿಸುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಹಿನ್ನೆಲೆ ಎಚ್ಚರಿಕೆ ಕ್ರಮವಾಗಿ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದು, ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಉಳಿದ ಇಬ್ಬರು ಆರೋಪಿಗಳಾದ ಮಸ್ತಾನ್ ಹಾಗೂ ಸಾಗರ್‌ಗಾಗಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಇದನ್ನೂ ಓದಿ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಆರೋಪದಡಿ ಜೈಲು ಅಧೀಕ್ಷಕ ಸೇರಿದಂತೆ ಒಟ್ಟು ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಕೈದಿಗಳಿಗೆ ಕಬ್ಬಿಣ ಕತ್ತರಿಸುವ ಸಾಧನ ಹೇಗೆ ದೊರೆಯಿತು, ಗ್ರಿಲ್ ಕತ್ತರಿಸಿ ಗೋಡೆ ಹಾರುವವರೆಗೂ ಸಿಬ್ಬಂದಿಗೆ ಮಾಹಿತಿ ಏಕೆ ಸಿಗಲಿಲ್ಲ ಎಂಬ ಕುರಿತು ತನಿಖೆ ನಡೆಯುತ್ತಿದೆ.
ಈ ಘಟನೆ ಜೈಲು ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ರಾಜಕೀಯ ವಲಯದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದ ಪ್ರಮುಖ ಕಾರಾಗೃಹದಲ್ಲೇ ಇಂತಹ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆದಿದೆ.



