ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಪ್ರಮುಖ ತೊಗರಿ ಉತ್ಪಾದನಾ ಜಿಲ್ಲೆಯಾದ ಕಲಬುರಗಿಯ ತೊಗರಿಗೆ ಶೀಘ್ರದಲ್ಲೇ ಹೊಸ ಬ್ರಾಂಡ್ ದೊರೆಯುವ ನಿರೀಕ್ಷೆಯಿದ್ದು, ಕಲಬುರಗಿ ಪಲ್ಸಸ್ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಕೃಷಿ ಮತ್ತು ಆಹಾರ ಸಂಸ್ಕರಣಾ ವಲಯ ಮುಂದಾಗಿದೆ.
ಕಲಬುರಗಿಯ ಹವಾಮಾನ ಮತ್ತು ಮಣ್ಣಿನ ಗುಣಮಟ್ಟದಿಂದಾಗಿ ಇಲ್ಲಿನ ತೊಗರಿಗೆ ವಿಶೇಷ ರುಚಿ ಹಾಗೂ ಗುಣಮಟ್ಟವಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಉತ್ತಮ ಬೆಲೆ ದೊರಕಿಸುವ ಉದ್ದೇಶದಿಂದ ಬ್ರಾಂಡ್ ಆಧಾರಿತ ಮಾರುಕಟ್ಟೆ ವ್ಯವಸ್ಥೆ ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ.
ಇದನ್ನೂ ಓದಿ:
ಈ ಬಗ್ಗೆ ಮಾಹಿತಿ ನೀಡಿದ ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲೆಯಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಉದ್ದು, ಹೆಸರು ಹಾಗೂ ಕಡಲೆ, ಈ ನಾಲ್ಕು ದ್ವಿದಳ ಧಾನ್ಯಗಳನ್ನು ಮುಖ್ಯವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ತೊಗರಿ ವಿಶಿಷ್ಟ ಗುಣವುಳ್ಳದ್ದಾಗಿರುವುದರಿಂದ ಅದಕ್ಕೆ ಬ್ರಾಂಡ್ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಲಬುರಗಿ ಪಲ್ಸಸ್ ಫೆಡರೇಷನ್ ಸ್ಥಾಪಿಸಿ ಅದರ ಮೂಲಕ ತೊಗರಿಯನ್ನು ಕೇವಲ ಬೇಳೆಯಾಗಿ ಮಾತ್ರವಲ್ಲದೆ, ಇದರಿಂದ ಲಾಡು, ಎನರ್ಜಿ ಡ್ರಿಂಕ್ ಸೇರಿದಂತೆ 78 ಉತ್ಪನ್ನಗಳನ್ನು ತಯಾರಿಸುವ ಯೋಜನೆ ರೂಪಿಸಲಾಗಿದೆ. ತೊಗರಿಗೆ ಬ್ರಾಂಡ್ ನೀಡುವ ಮುಖ್ಯ ಉದ್ದೇಶ ರೈತರಿಗೆ ಹೆಚ್ಚಿನ ಆದಾಯ ಒದಗಿಸುವುದಾಗಿದೆ ಎಂದಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪಿ. ವಾಸುದೇವ ನಾಯ್ಕ್, ಕೃಷಿ ವಿಜ್ಞಾನ ಕೇಂದಿಂದ ಕಳೆದ ಐದಾರು ವರ್ಷಗಳಿಂದ ರೈತರಿಗೆ ಗುಣಮಟ್ಟದ ತೊಗರಿ ಬೀಜಗಳನ್ನು ವಿತರಿಸಲಾಗುತ್ತಿದ್ದು, ಇದರಿಂದ ರೈತರು ಅಧಿಕ ಇಳುವರಿ ಜೊತೆಗೆ ಆದಾಯವೂ ಹೆಚ್ಚು ದೊರೆಯುತ್ತಿದೆ. ಇದರೊಂದಿಗೆ ತೊಗರಿ ಬೆಳೆಗಾರರಿಗೆ ಕೀಟ ಬಾಧೆ ತಡೆ ಸೇರಿದಂತೆ ಅಧಿಕ ಇಳುವರಿಗೆ ನೆರವಾಗುವ ಉತ್ತಮ ತಂತ್ರಜ್ಞಾನ ಮಾಹಿತಿಯನ್ನು ಸಹ ನೀಡಲಾಗುತ್ತಿದೆ. ಈಗ ಜಿಲ್ಲೆಯ ತೊಗರಿಗೆ ಬ್ರಾಂಡಿಂಗ್ ಸಹ ಲಭ್ಯವಾಗಲಿದ್ದು ಇದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ತಿಳಿಸಿದ್ದಾರೆ.



