ಕಲಬುರಗಿ ಜಿಲ್ಲೆಯಾದ್ಯಂತ ವರುಣನ ಆರ್ಭಟ: ಜನ ಜೀವನ ತತ್ತರ

ಹೊಸದಿಗಂತ ವರದಿ, ಕಲಬುರಗಿ:

ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಸುರಿಯುತ್ತಿರುವ ಭಾರಿ ಮಳೆಯು ಹಲವು ಅವಾಂತರಗಳಿಗೆ ಎಡೆಮಾಡಿಕೊಟ್ಟಿದೆ. ರೈತರ ಬೆಳೆ ಜಲಾವೃತಗೊಂಡು ನಾಶವಾಗುವ ಭೀತಿ ಎದುರಾಗಿದೆ. ಇನ್ನು ಹಲವು ಗ್ರಾಮಗಳಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದು, ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿವೆ. ವರುಣನ ಆರ್ಭಟಕ್ಕೆ ಜನ ಜೀವನ ತತ್ತರಿಸಿಹೋಗಿದೆ.

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಜಲಾವೃತಗೊಂಡಿವೆ. ರೈತರು ಸಾಲಶೂಲ ಮಾಡಿ ಬಿತ್ತನೆ ಮಾಡಿದ ಹತ್ತಿ, ತೊಗರಿ, ಸೋಯಾಬಿನ್, ಹೆಸರು ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿವೆ. ಬೆಳೆ ಜೊತೆ ರೈತರ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಪ್ರತಿ ಎಕರೆಗೆ 20 ಸಾವಿರ ರೂಪಾಯಿ ಪರಿಹಾರ ನೀಡಲು ಅನ್ನದಾತರು ಅಗ್ರಹಿಸುತ್ತಿದ್ದಾರೆ.

ಕೊಚ್ಚಿಹೋದ ಸೇತುವೆ:
ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿವೆ. ಜಿಲ್ಲೆಯ ಆಳಂದ ತಾಲೂಕಿನ ಆಳಂದ- ಮುನ್ನಳ್ಳಿ ರಸ್ತೆಯ ಸಂಪರ್ಕ ಸೇತುವೆ ಮಳೆ ನೀರಿನಿಂದ ಜಲಾವೃತಗೊಂಡು, ಸಂಪರ್ಕ ಕಡಿತಗೊಳ್ಳಿಸಿದೆ.

ಕಲಬುರಗಿ ತಾಲೂಕಿನ ಭೀಮಳ್ಳಿ- ಬೋಸಗಾ ನಡುವಿನ ಸಂಪರ್ಕ ಸೇತುವೆ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಎರಡು ಗ್ರಾಮಗಳ ನಡೆವೆ ಸಂಪರ್ಕ ಕಡಿತಗೊಂಡಿದೆ. ಹೊಲಗಳಿಗೆ ಹೋಗಿದ್ದ ಭೀಮಳ್ಳಿ ಗ್ರಾಮದ ರೈತರು ತೀವ್ರ ಪರದಾಡುವಂತಾಗಿದೆ. ಗ್ರಾಮಕ್ಕೆ ಹೋಗಲು ಸುಮಾರು 14 ಕಿ. ಮೀಟರ್ ದೂರ ಸುತ್ತಿಕೊಂಡು ಸಂಚರಿಸಿ ಬರಬೇಕಾಗಿದೆ. ಹಳ್ಳದ ನೀರು ಭೀಮಳ್ಳಿ ಗ್ರಾಮದ ಹಲವು ಮನೆಗಳಿಗೆ ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!