ಹೊಸದಿಗಂತ ವರದಿ ಕಲಬುರಗಿ:
ಕಳೆದ 21 ದಿನಗಳಿಂದ ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಹಿಂದು ಮಹಾಗಣಪತಿ ಸಮಿತಿ ವತಿಯಿಂದ ಪ್ರತಿಷ್ಠಾಪನೆ ಮಾಡಲಾದ ಹಿಂದು ಮಹಾಗಣಪತಿಯ ಮೈಮೇಲೆ ಇದ್ದಂತಹ ವಸ್ತ್ರಾಭರಣಗಳ ಹರಾಜು ಪ್ರಕ್ರಿಯೆ ಕಾರ್ಯ ಶುಕ್ರವಾರ ವಿಸರ್ಜನಾ ಕಾರ್ಯಕ್ರಮಕ್ಕೂ ಮುನ್ನ ಜರುಗಿತು.
ಮಹಾಗಣಪತಿಯ ಮೈಮೇಲಿದ್ದ ವಸ್ತ್ರಾಭರಣಗಳಾದ ಗಣಪತಿಯ ಕಳಸ, ಬೆಳ್ಳಿಯ ಉಡದಾರ, ಕೈಯಲ್ಲಿನ ಬೆಳ್ಳಿಯ ಖಡ್ಗ, ಲಿಂಗದಕಾಯಿ ಹಾಗೂ ಹತ್ತಿಯ ಹಾರದ ಹರಾಜು ಪ್ರಕ್ರಿಯೆ ಮಾಡಲಾಯಿತು.
ಮಹಾಗಣಪತಿ ಕಳಸವನ್ನು 6,000 ರೂ ಗೆಹರಾಜು ಮಾಡಲಾಗಿದ್ದು, ಬಸವ ನಗರದ ಮನೋಹರ ಎಂಬವರು ತೆಗೆದುಕೊಂಡರು. ಗಣಪತಿಯ ಬೆಳ್ಳಿಯ ಉಡುದಾರವನ್ನು 13,500 ರೂಪಾಯಿಗೆ ಹರಾಜು ಮಾಡಿದ್ದು, ಕಲಬುರಗಿ ನಗರದ ರವಿಚಂದ್ರ ಮುತ್ತಿನ ಪಡೆದರು.
ಗಣೇಶನ ಕೈಯಲ್ಲಿನ ಬೆಳ್ಳಿಯ ಖಡ್ಗವನ್ನು 21,500 ರೂಪಾಯಿಗೆ, ನಗರದ ರವಿಚಂದ್ರ ಮುತ್ತಿನ ಪಡೆದರು. ಕೊರಳಲ್ಲಿನ ಲಿಂಗದಕಾಯಿಯನ್ನು ರವಿಚಂದ್ರ ಮುತ್ತಿನ ಅವರು 28,500 ರೂಪಾಯಿಗೆ ಪಡೆದುಕೊಂಡರು. ಅದೇ ರೀತಿ ಕೊನೆಯಲ್ಲಿ ಗಣೇಶನ ಮೈಮೇಲಿನ ಹತ್ತಿಯ ಹಾರವನ್ನು 1500ಗೆ ರಾಹುಲ್ ಮಹೀಂದ್ರಕರ ಅವರು ಪಡೆದುಕೊಂಡರು.
ಹಿಂದೂ ಮಹಾಗಣಪತಿ ವಸ್ತ್ರಾಭರಣಗಳನ್ನು ಪಡೆದ ಎಲ್ಲಾ ಗಣೇಶನ ಭಕ್ತಾಧಿಗಳಿಗೆ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಡೆ ಧನ್ಯವಾದಗಳು ತಿಳಿಸಿದರು.