August 4, 2026
Tuesday, August 4, 2026
spot_img

ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದ ಕಂದಮ್ಮ, ಸರ್ಕಾರಿ ಆಸ್ಪತ್ರೆಗೆ ಕರೆತಂದ್ರೆ ವೈದ್ಯರೇ ಇಲ್ಲ!

ಹೊಸ ದಿಗಂತ ವರದಿ ಹಾವೇರಿ:

ಹಾವೇರಿ ಸಮೀಪದ ಹಾವನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಕರ್ತವ್ಯದಲ್ಲಿರದ ಕಾರಣ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಒಂದೂವರೆ ವರ್ಷದ ಭವಾನಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ, ಮೃತ ಮಗುವಿನ ಪಾಲಕರು ಹಾಗೂ ಗ್ರಾಮಸ್ಥರು ಆರೋಗ್ಯ ಕೇಂದ್ರದ ಎದುರು ಶುಕ್ರವಾರದಂದು ಪ್ರತಿಭಟನೆ ನಡೆಸಿದರು.

ಮೃತ ಭವಾನಿ ಹಾವನೂರ ಗ್ರಾಮದ ಮಹೇಶ ಹಾಗೂ ಪವಿತ್ರಾ ಕಿಳ್ಳಿಕ್ಯಾತರ ದಂಪತಿಯ ಪುತ್ರಿಯಾಗಿದ್ದು, ಮಗುವಿನ ಆರೋಗ್ಯದಲ್ಲಿ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಲಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ  ಕರೆತಂದಿದ್ದರು. ಆದರೆ ಆ ಸಂದರ್ಭದಲ್ಲಿ ವೈದ್ಯರು ಕರ್ತವ್ಯದಲ್ಲಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಮಗುವಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಪರಿಸ್ಥಿತಿ ಗಂಭೀರಗೊಂಡು ಮೃತಪಟ್ಟಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿ, ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಯಲ್ಲಿ ಉಂಟಾಗಿರುವ ವೈದ್ಯರ ಕೊರತೆ ಮತ್ತು ನಿರ್ಲಕ್ಷ್ಯವನ್ನು ಖಂಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಸದಾ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಇಂತಹ ದುರ್ಘಟನೆಗಳು ಮರುಕಳಿಸದಂತೆ ಆರೋಗ್ಯ ಇಲಾಖೆ ತಕ್ಷಣ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:

ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಘಟನೆ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !