ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಭಾರೀ ಜನಮೆಚ್ಚುಗೆ ಗಳಿಸಿದೆ. ಚಿತ್ರ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ವಿಮರ್ಶಕರು, ಚಿತ್ರಭಿಮಾನಿಗಳು ಇದು ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರವೆಂದು ಶ್ಲಾಘಿಸುತ್ತಿದ್ದಾರೆ. ಹೀಗಿದ್ದರೂ ಸಹ ಬಾಲಿವುಡ್ ಖ್ಯಾತನಾಮರು ಚಿತ್ರದ ಕುರಿತು ಮಾತನಾಡುತ್ತಿಲ್ಲ. ಚಿತ್ರದ ಬಗ್ಗೆ ಬಾಲಿವುಡ್ ಮೌನವನ್ನು ನಟಿ ಕಂಗನಾ ರಾಣಾವತ್ ಪ್ರಶ್ನಿಸಿದ್ದಾರೆ.
ಚಿತ್ರದ ಬಗ್ಗೆ ಬಾಲಿವುಡ್ ಸ್ಟಾರ್ ಗಳು ಮೌನ ವಹಿಸಿರುವುದು ಕಂಗನಾ ರಣಾವತ್ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಹುಟ್ಟುಹಾಕಿದೆ. ಜನರು ಥಿಯೇಟರ್ ಗಳಲ್ಲಿ ಮುಗಿಬಿದ್ದು ಚಿತ್ರವನ್ನು ನೋಡುತ್ತಿದ್ದಾರೆ. ಈ ವರ್ಷದ ಅತ್ಯಂತ ಯಶಸ್ವಿ ಮತ್ತು ಅತಿ ಹೆಚ್ಚು ಲಾಭಗಳಿಕೆ ಮಾಡಿದ ಚಿತ್ರವಾಗುವತ್ತ ಸಿನಿಮಾ ಮುನ್ನುಗ್ಗುತ್ತಿದೆ. ಕೊರೊನಾ ಬಳಿಕ ದೊಡ್ಡ ಸಿನಿಮಾಗಳನ್ನು ಮಾತ್ರ ಜನ ಥಿಯೇಟರ್ ಗಳಲ್ಲಿ ನೋಡುತ್ತಾರೆ ಎಂಬ ಕಲ್ಪನೆಯನ್ನು ಈ ಚಿತ್ರ ತೊಡೆದುಹಾಕಿದೆ.
ಎಲ್ಲಾ ಶೋಗಳು ಹೌಸ್ಫುಲ್ ಆಗುತ್ತಿವೆ. ಇಡೀ ಜಗತ್ತು ಈ ಚಿತ್ರವನ್ನು ಗಮನಿಸುತ್ತಿದೆ. ಆದರೆ ಬಾಲಿವುಡ್ ಮಂದಿ ಮಾತ್ರ ತಮ್ಮಷ್ಟಕ್ಕೆ ತಾವು ಮೌನವಾಗಿದ್ದಾರೆ. ಯಾರೊಬ್ಬರು ಚಿತ್ರದ ಬಗ್ಗೆ ಮಾತನಾಡುತ್ತಿಲ್ಲ, ಹೀಗೇಕೆ? ನನಗೆ ಅರ್ಥವಾಗಿಲ್ಲ ಎಂದು ಕಂಗನಾ ಇನ್ಸ್ಟಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ಮಿಥುನ್ ಚಕ್ರವರ್ತಿ ಮೊದಲಾದವರ ತಾರಾಂಗಣವಿದೆ.