ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾದ ಟ್ರೈಲರ್ ಬಿಡುಗಡೆಯಾದಗಿನಿಂದಲೂ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿದೆ. ಸೆಪ್ಟೆಂಬರ್ 6ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನಿಂದ ಪ್ರಮಾಣೀಕರಣ ಸಿಗದ ಕಾರಣ ಬಿಡುಗಡೆಯಾಗಿಲ್ಲ.
ಆದ್ರೆ ಇದೀಗ ಎಮರ್ಜೆನ್ಸಿಗೆ ಸೆನ್ಸಾರ್ ಮಂಡಳಿ ಗ್ರೀನ್ಸಿಗ್ನಲ್ ನೀಡಿದೆ.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ನ(ಸಿಬಿಎಫ್‌ಸಿ) ಸ್ಕ್ರೀನಿಂಗ್ ಸಮಿತಿಯು ಬಿಡುಗಡೆಗೆ ಮುನ್ನ ಮೂರು ಕಟ್ ಹಾಗೂ 10 ಬದಲಾವಣೆ ಮಾಡಬೇಕೆಂಬ ಷರತ್ತಿನ ಮೇಲೆ ‘ಯುಎ’ ಪ್ರಮಾಣೀಕರಣಕ್ಕೆ ಅನುಮೋದನೆ ನೀಡಿದೆ.
‘ಯುಎ’ ಪ್ರಮಾಣೀಕರಣ ಎಂದರೆ ಚಿತ್ರವು ಪೋಷಕರ ಮಾರ್ಗದರ್ಶನದೊಂದಿಗೆ ವೀಕ್ಷಿಸಲು ಸೂಕ್ತವಾಗಿದೆ. ಮೂಲಗಳ ಪ್ರಕಾರ, ನಿರ್ಮಾಪಕರು ಜುಲೈ 8 ರಂದು ಚಲನಚಿತ್ರವನ್ನು ಪ್ರಮಾಣೀಕರಣಕ್ಕಾಗಿ ಸಲ್ಲಿಸಿದರು.
ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಚಿತ್ರದಲ್ಲಿ ತೋರಿಸಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಸತ್ಯವನ್ನು ಪ್ರಸ್ತುತಪಡಿಸಲು ಸೆನ್ಸಾರ್ ಮಂಡಳಿ ಕೇಳಿದೆ. ವಾಸ್ತವವಾಗಿ ಸಿನಿಮಾದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ರಿಚರ್ಡ್ ಮಿಲ್ಹೌಸ್ ನಿಕ್ಸನ್ ಅವರು ಭಾರತೀಯ ಮಹಿಳೆಯರ ಬಗ್ಗೆ ಮಾಡಿದ ಅವಹೇಳನಕಾರಿ ಹೇಳಿಕೆಗಳು ಮತ್ತು ಭಾರತೀಯರು ಮೊಲಗಳಂತೆ ಸಂತಾನೋತ್ಪತ್ತಿ ಮಾಡುವ ಮಾತುಗಳನ್ನು ಒಳಗೊಂಡಿದೆ. ಈ ಹೇಳಿಕೆಗಳ ಮೂಲವನ್ನು ಪ್ರಸ್ತುತಪಡಿಸುವಂತೆ ಸಿಬಿಎಫ್‌ಸಿ ಕೇಳಿದೆ.
ಅಲ್ಲದೆ ಸಿನಿಮಾದಲ್ಲಿ ಮಾಡಬೇಕಾದ 10 ಬದಲಾವಣೆಗಳ ಪಟ್ಟಿಯನ್ನು ಕಳುಹಿಸಿದೆ. ಅವುಗಳಲ್ಲಿ ಹೆಚ್ಚಿನವು ಸಿಖ್ ಸಮುದಾಯದಿಂದ ಆಕ್ಷೇಪಿಸಲ್ಪಟ್ಟ ದೃಶ್ಯಗಳನ್ನು ಒಳಗೊಂಡಿವೆ.
ಕಂಗನಾ ರಣಾವತ್ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.