ಹಾವೇರಿಯಲ್ಲಿ ನಡೆಯುವ ಕನ್ನಡ ಅಕ್ಷರ ಜಾತ್ರೆಗೆ ಎಲ್ಲಾ ಮಠಾಧೀಶರ ಸಹಕಾರ: ಸದಾಶಿವ ಶ್ರೀ

ಹೊಸ ದಿಗಂತ ವರದಿ, ಹಾವೇರಿ:

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕಾರ್ಯಗಳನ್ನು ವಿವಿಧ ಮಠಾಧೀಶರು ವೀಕ್ಷಣೆ ಮಾಡಿದರು.
ಮಂಗಳವಾರ ಸಂಜೆ ನಗರದ ಹೊರ ವಲಯದ ಅಜ್ಜಯ್ಯನ ಗುಡಿ ಎದುರು ಸಮ್ಮೇಳನದ ಸ್ಥಳಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿ, ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಗಡಿ ಪ್ರಭುಸ್ವಾಮಿಮಠ ಹಾಗೂ ಗುತ್ತಲ ಕಲ್ಮಠದ ಗುರುಸಿದ್ದ ಮಹಾಸ್ವಾಮಿಗಳು, ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಬುಡಕಟ್ಟು ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಬೃಹತ್ ಆಗಿ ವಿನ್ಯಾಸಗೊಂಡಿರುವ ಮುಖ್ಯ ವೇದಿಕೆ, ಅಡುಗೆ ಸಿದ್ಧತೆಗಳು, ದಾಸ್ತಾನು ಕೊಠಡಿ, ಅಡುಗೆ ತಯಾರಿ, ಮೆನು ಕುರಿತಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹುಕ್ಕೇರಿಮಠದ ಶ್ರೀಗಳು ಮಾತನಾಡಿ, ಈ ಸಮ್ಮೇಳನದ ಯಶಸ್ವಿಗೆ ಎಲ್ಲ ಮಠಾಧೀಶರು ಕೈಜೋಡಿಸಿದ್ದಾರೆ. ಮಠಕ್ಕೆ ಬರುವ ಒಂದು ಲಕ್ಷ ಖಡಕ್ ರೊಟ್ಟಿ ಸಮ್ಮೇಳನಕ್ಕೆ ನೀಡಲಾಗುತ್ತಿದೆ. ಈ ಹಿಂದೆ ನಡೆದ ಸಮ್ಮೇಳನಕ್ಕೆ ಅನೇಕ ಸಾಧು-ಸಂತರು ತಮ್ಮದೇ ಕೊಡುಗೆ ನೀಡಿದ್ದಾರೆ. ಒಟ್ಟಾರೆ ಅದ್ಧೂರಿ ಸಮ್ಮೇಳನದ ನಿರೀಕ್ಷೆಯಲ್ಲಿ ನಾವೆಲ್ಲ ಇದ್ದೇವೆ. ಎಲ್ಲರೂ ಸಮ್ಮೇಳನದ ಯಶಸ್ವಿಗೆ ದುಡಿಯೋಣ. ನಾಡಿನ ಜನತೆ ಅಕ್ಷರ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದರು.
ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಜಿ.ಪಂ.ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ ಸಂಗೂರ, ಉದ್ಯಮಿ ಪವನ ಬಹದ್ದೂರ ದೇಸಾಯಿ, ವಿವಿಧ ಇಲಾಖಾ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!